ಬೆಂಗಳೂರು,ಏ.05 (DaijiworldNews/HR): "ಬಿಜೆಪಿಯ ನಾಯಕರು ಚುನಾವಣಾ ಪ್ರಚಾರಕ್ಕೆ ಹೋದಲ್ಲೆಲ್ಲ ಬೇರೆ ಪಕ್ಷದ ಸರ್ಕಾರಗಳನ್ನು ಭ್ರಷ್ಟರು ಎಂದು ಆರೋಪ ಮಾಡುತ್ತಿದ್ದಾರೆ. ಹಾಗಾದರೆ ಬಿಜೆಪಿಯವರೇನು ಸತ್ಯ ಹರಿಶ್ಚಂದ್ರರ ಮಕ್ಕಳೇ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ.
ಈ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, "ಭ್ರಷ್ಟರೆಲ್ಲ ಬಿಜೆಪಿ ಪಕ್ಷದಲ್ಲೇ ತುಂಬಿದ್ದಾರೆ. ಆದರೆ ಪ್ರಧಾನಿ ನರೇಂದ್ರಮೋದಿ, ಗೃಹಸಚಿವ ಅಮಿತ್ ಷಾ ಸೇರಿ ಮತ್ತಿತರರು ಹೋದ ಕಡೆಯಲ್ಲೆಲ್ಲ ಬೇರೆ ಪಕ್ಷದ ಸರ್ಕಾರಗಳನ್ನು ಭ್ರಷ್ಟರು ಎಂದು ಟೀಕೆ ಮಾಡುತ್ತಿದ್ದಾರೆ. ಜನ ಎಲ್ಲವನ್ನೂ ನೋಡುತ್ತಿದ್ದು, ತಕ್ಕ ಪಾಠ ಕಲಿಸುತ್ತಾರೆ" ಎಂದರು.
ಬಿಜೆಪಿಯವರು ದೇಶವನ್ನು ಛಿದ್ರ ಮಾಡುತ್ತಿದ್ದು, ಒಡೆದಾಳುವ ನೀತಿಯ ಮೂಲಕವೇ ಬಹಳಷ್ಟು ದಿನ ಅಧಿಕಾರ ನಡೆಸಬಹುದು ಎಂಬ ಭ್ರಮೆಯಲ್ಲಿದ್ದು, ಜನ ಬಹಳ ದಿನ ಸಹಿಸಿಕೊಳ್ಳುವುದಿಲ್ಲ. ಪ್ರಧಾನಿ ನರೇಂದ್ರಮೋದಿ ಅವರು ಬಾಂಗ್ಲಾ ದೇಶಕ್ಕೆ ಹೋಗಿ ತಾವು ಬಾಂಗ್ಲಾ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಜೈಲಿಗೆ ಹೋಗಿದ್ದಾಗಿ ಹೇಳಿಕೊಂಡಿದ್ದಾರೆ. ಬಾಂಗ್ಲಾ ಹೋರಾಟದಲ್ಲಿ ಮೋದಿ ಪಾಲ್ಗೊಂಡೇ ಇರಲಿಲ್ಲ. ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ" ಎಂದಿದ್ದಾರೆ,
ಇನ್ನು "ಆರ್ಎಸ್ಎಸ್ ಸಿದ್ದಾಂತವೆಂದರೆ ವಿಷವಿದ್ದಂತೆ, ಅದನ್ನು ರುಚಿ ನೋಡಲು ಸಾಧ್ಯವಿಲ್ಲ. ಒಂದು ತೊಟ್ಟು ಕುಡಿದರೂ ಕೂಡ ಸಾವು ಖಚಿತ. ಹೋಗಲಿ ಪಾಪ ಎಂದು ಒಮ್ಮೆ ಅವಕಾಶ ಕೊಟ್ಟರೆ ಮುಗಿಯಿತು. ಎಲ್ಲವೂ ಮುಗಿದಂತೆ" ಎಂದು ಹೇಳಿದ್ದಾರೆ.