ಬೆಂಗಳೂರು, ಏ 5 (DaijiworldNews/MS): ಮಾಜಿ ಸಚಿವ, ಶಾಸಕ ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು ಹೋಮ್ ಕ್ವಾರಂಟೈನ್ ನಲ್ಲಿದ್ದ ಅವರಿಗೆ ಭಾನುವಾರ ರಾತ್ರಿ ಉಸಿರಾಟದ ತೊಂದರೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಹಾಗೂ ಬಿಪಿ, ಶುಗರ್ ನಲ್ಲಿ ಏರುಪೇರಾಗಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗೋಕಾಕ್ ಆಸ್ಪತ್ರೆಯ ಟಿಹೆಚ್ ಒ ಡಾ. ಮುತ್ತಣ್ಣ ಕೋಪದ್ ಹೇಳಿದ್ದಾರೆ.
ಹೀಗಾಗಿ ಸಿಡಿ ಪ್ರಕರಣದಲ್ಲಿ ಎಸ್ಐಟಿ ತನಿಖಾಧಿಕಾರಿಗಳ ಮುಂದೆ ಸೋಮವಾರ ಹಾಜರಾಗಬೇಕಿದ್ದ ರಮೇಶ್ ಜಾರಕಿಹೊಳಿಗೆ ಕೊರೊನಾ ದೃಢಪಟ್ಟಿರುವುದರಿಂದ ಎಸ್ಐಟಿ ತನಿಖೆ ಕತೆ ಏನಾಗಲಿದೆ ಎಂಬ ಪ್ರಶ್ನೆ ಸಹಜವಾಗಿ ಉದ್ಭವಿಸಿದೆ. ಇದರ ಬೆನ್ನಲ್ಲೆ ಕಾಂಗ್ರೆಸ್ "ಕಳ್ಳನಿಗೊಂದು ಪಿಳ್ಳೆ ನೆಪ" ಎಂದು ವ್ಯಂಗ್ಯವಾಡಿದೆ.
ಈ ಬಗ್ಗೆ ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಟ್ವೀಟರ್ ಪೇಜ್ ನಲ್ಲಿ ಟ್ವೀಟ್ ಮಾಡಿದ್ದು, ರಮೇಶ್ ಜಾರಕಿಹೊಳಿ "ಜಾರಿಕೊಳ್ಳಲು" ಕರೋನಾ ಹೆಸರಿನ ನೆಪವೇ?ಭೀಮಾ ಕೊರೆಗಾಂವ್ ಪ್ರಕರಣದಲ್ಲಿ ದಲಿತಪರ ಧ್ವನಿಯಾಗಳಾಗಿದ್ದ ಚಿಂತಕರ ವೃದ್ಧಾಪ್ಯವನ್ನು ಲೆಕ್ಕಿಸದೆ, ಅನಾರೋಗ್ಯವನ್ನೂ ಪರಿಗಣಿಸದೆ ಕ್ರೂರವಾಗಿ ನಡೆಸಿಕೊಂಡ ಬಿಜೆಪಿ ಈಗ ಅತ್ಯಾಚಾರ ಆರೋಪಿಗೆ ಅನಾರೋಗ್ಯದ ನೆಪ ಹೇಳುವುದು ಹಾಸ್ಯಾಸ್ಪದ."ಕಳ್ಳನಿಗೊಂದು ಪಿಳ್ಳೆ ನೆಪ"!! ಎಂದು ಲೇವಡಿ ಮಾಡಿದೆ.
ಇದಕ್ಕೂ ಮುಂಚೆ ಟ್ವೀಟ್ ಮಾಡಿದ್ದ ಕಾಂಗ್ರೆಸ್ ಸಂತ್ರಸ್ತ ಯುವತಿ ಹಾಜರಾದ ದಿನದಿಂದಲೂ ಆರೋಪಿ ತಲೆಮರೆಸಿಕೊಂಡಿದ್ದಾರೆ, ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವುದು ತಿಳಿದಿಲ್ಲ.ಆರೋಪಿಯೊಬ್ಬನನ್ನು ತಲೆಮರೆಸಿಕೊಳ್ಳಲು ಸಹಕರಿಸಿದ ಕುಖ್ಯಾತಿ ಈ ಸರ್ಕಾರಕ್ಕೆ ಸಲ್ಲಬೇಕು.ಅತ್ಯಾಚಾರ ಆರೋಪಿಯನ್ನು ರಕ್ಷಿಸುವ ಕೀರ್ತಿ ಬಿಜೆಪಿಗೆ ಸಲ್ಲಬೇಕು ಎಂದು ಹೇಳಿತ್ತು.