ಕೊಪ್ಪಳ, ಎ.05 (DaijiworldNews/MB) : ''ಕಾಂಗ್ರೆಸ್ ಚಿಲ್ಲರೆ ರಾಜಕಾರಣ ಮಾಡುತ್ತಿದೆ. ಷಡ್ಯಂತ್ರ ಮಾಡಿದೆ'' ಎಂದು ಸಚಿವ ಜಗದ್ದೀಶ ಶೆಟ್ಟರ್ ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯನವರು, ''ಬಿಜೆಪಿ ಅವರ ಬಳಿ ಕಾಂಗ್ರೆಸ್ ಷಡ್ಯಂತ್ರ ಮಾಡಿದೆ ಅಂತ ಅವರಲ್ಲಿ ಸಾಕ್ಷಿ ಇದೆಯೇನ್ರಿ?'' ಎಂದು ಪ್ರಶ್ನಿಸಿದ್ದಾರೆ.
ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿ ಮಾತನಾಡಿದ ಅವರು, ''ಚಿಲ್ಲರೆ ರಾಜಕಾರಣ ಯಾರ್ರೀ ಮಾಡ್ತಿದ್ದಾರೆ? ಬಿಜೆಪಿಯವರಲ್ಲಿ ಸಾಕ್ಷಿ ಇದೆಯಾ? ತಮ್ಮ ಮೈ ಮೇಲೆ ಬಂದಾಗ ಬಿಜೆಪಿಯವರು ಸುಳ್ಳು ಹೇಳ್ತಾರೆ'' ಎಂದು ದೂರಿದರು.
ಈ ಸಂದರ್ಭದಲ್ಲೇ ಶಾಸಕ ರಮೇಶ ಜಾರಕಿಹೊಳಿ ಕೊರೊನಾ ನೆಪದಲ್ಲಿ ತನಿಖೆಗೆ ಹಾಜರಾಗದ ಬ್ಗಗೆ ಪ್ರತಿಕ್ರಿಯೆ ನೀಡಿದ ಅವರು, ''ಈ ಬಗ್ಗೆ ನಾನು ಏನೂ ಮಾತನಾಡಲ್ಲ'' ಎಂದರು. ಹಾಗೆಯೇ, ''ಮಾಜಿ ಸಚಿವ ಡಿ.ಸುಧಾಕರ ಹೆಸರು ಸಿಡಿ ಲೇಡಿ ಪ್ರಕರಣದಲ್ಲಿ ಕೇಳಿ ಬಂದಾಗ ಅವರು ನನಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದಿದ್ದಾರೆ. ಈ ಪ್ರಕರಣದಲ್ಲಿ ಯಾರೇ ಇದ್ದರೂ ಸಮಗ್ರ ತನಿಖೆಯಾಗಲಿ'' ಎಂದು ಹೇಳಿದರು.
''ಬೆಳಗಾವಿ ಲೋಕಸಭೆ ಮತ್ತು 2 ವಿಧಾನಸಭೆ ಉಪ ಚುನಾವಣೆಯಲ್ಲಿ ನಾವು ಗೆಲ್ಲುವುದು ಖಚಿತ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.