ಬೆಳಗಾವಿ, ಏ.05 (DaijiworldNews/HR): ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ದೃಢಪಟ್ಟ ಬೆನ್ನಲ್ಲೇ ಅವರ ಕಾರು ಚಾಲಕ ಹಾಗೂ ಅಡುಗೆ ಸಹಾಯಕರಿಗೂ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ತಿಳಿದುಬಂದಿದೆ.
ಈ ಕುರಿತು ಗೋಕಾಕ ತಾಲ್ಲೂಕು ಆಸ್ಪತ್ರೆ ವೈದ್ಯ ರವೀಂದ್ರ ಸ್ಪಷ್ಟನೆ ನೀಡಿದ್ದು, ಮಾಜಿ ಸಚಿವರ ಕಾರು ಚಾಲಕ ಹಾಗೂ ಅಡುಗೆ ಭಟ್ಟ ಇಬ್ಬರಿಗೂ ಕೊರೊನಾ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ಕಾರು ಚಾಲಕ ಹಾಗೂ ಅಡುಗೆ ಭಟ್ಟನಿಗೂ ಕೊರೊನಾ ಕಂಡು ಬಂದಿರುವ ಹಿನ್ನಲೆಯಲ್ಲಿ ಅವರ ಆಪ್ತ ವರ್ಗದಲ್ಲಿದ್ದವರೆಲ್ಲರೂ ಕೊರೊನಾ ಪರೀಕ್ಷೆಗೆ ಒಳಗಾಗಬೇಕಾಗಬಹುದಾದ ಪರಿಸ್ಥಿತಿ ಸೃಷ್ಟಿಯಾಗಿದೆ. ಸದ್ಯ ಕೊರೊನಾ ಪಾಸಿಟಿವ್ ಬಂದಿರುವುದರಿಂದಾಗಿ ರಮೇಶ್ ಜಾರಕಿಹೊಳಿ ಉಪಚುನಾವಣೆ ಪ್ರಚಾರಕ್ಕೆ ಗೈರಾಗಲಿದ್ದಾರೆ.
ಇನ್ನು ಗೋಕಾಕ ತಾಲ್ಲೂಕು ಆಸ್ಪತ್ರೆ ವೈದ್ಯರು ರಮೇಶ್ ಜಾರಕಿಹೊಳಿಗೆ ಇನ್ನೂ ಐದರಿಂದ ಹತ್ತು ದಿನಗಳ ಕಾಲ ಐಸಿಯುನಲ್ಲಿಯೇ ಚಿಕಿತ್ಸೆ ನೀಡಲು ಯೋಚಿಸಿದ್ದು, ಹಾಗಾಗಿ ಕೆಲವು ದಿನಗಳವರೆಗೆ ರಮೇಶ್ ಜಾರಕಿಹೊಳಿ ಬೆಂಗಳೂರಿಗೆ ಸಂಭವ ಕಡಿಮೆ ಇದ್ದು, ಎಸ್ಐಟಿ ತನಿಖೆಯಿಂದಲೂ ಸದ್ಯಕ್ಕೆ ವಿನಾಯಿತಿ ಪಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.