ಬೆಂಗಳೂರು, ಎ.05 (DaijiworldNews/PY): 1 ರಿಂದ 9ನೇ ತರಗತಿವರೆಗೆ ಪರೀಕ್ಷೆ ನಡೆಸಬೇಕೆ ಅಥವಾ ಬೇಡವೇ ಎನ್ನುವ ವಿಚಾರದ ಬಗ್ಗೆ ಚರ್ಚೆ ನಡೆಯುತ್ತಿದೆ. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಸೂಕ್ತವಾದ ತೀರ್ಮಾನ ತೆಗೆದುಕೊಳ್ಳುವೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, "ಕೊರೊನಾ ಸೋಂಕು ಹೆಚ್ಚಳವಾದ ಕಾರಣ 6-9 ತರಗತಿಗಳು ಎಪ್ರಿಲ್ 20ರವರೆಗೆ ಬಂದ್ ಆಗಿರಲಿವೆ. ಇಂದು ನಡೆದ ಸಭೆಯಲ್ಲಿ ಎಲ್ಲರಿಗೂ ಕೂಡಾ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳುವ ಅವಕಾಶ ಕಲ್ಪಿಸಲಾಗಿತ್ತು. ಇನ್ನೆರಡು ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಮಾಡಬೇಕೆ?. ಆರ್ಟಿಐ ಆಕ್ಟ್ ಅಡಿ ಪರೀಕ್ಷೆ ನಡೆಸಬೇಕೆ ಎನ್ನುವ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಮುಂಬರುವ ದಿನಗಳಲ್ಲಿ ಪುಸ್ತಕ ಖರೀದಿ ಹಾಗೂ ಆರ್ಟಿಐ ಹಣ ಮರುಪಾವತಿ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ" ಎಂದಿದ್ದಾರೆ.
"2020-21ನೇ ಸಾಲಿಗೆ 1-9 ತರಗತಿಗಳಿಗೆ ಮೌಲ್ಯಾಂಕನ ಪರೀಕ್ಷೆ ವೇಳಾಪಟ್ಟಿಯನ್ನು ನಿಗದಿ ಮಾಡಬೇಕು. 1-9 ತರಗತಿವರೆಗೆ ಎಪ್ರಿಲ್ 14ರಿಂದ ಪರೀಕ್ಷೆ ನಡೆಸಬೇಕು" ಎಂದು ಸಭೆಯಲ್ಲಿ ಭಾಗವಹಿಸಿದ್ದ ರುಪ್ಸಾ ಸಂಘಟನೆಯ ಪ್ರತಿನಿಧಿಗಳು ಮನವಿ ಮಾಡಿದ್ದಾರೆ.
"ಎಪ್ರಿಲ್ 22ಕ್ಕೆ ಪರೀಕ್ಷೆ ಮುಗಿಸಿ, ಎಪ್ರಿಲ್ 30ರೊಳಗೆ ಫಲಿತಾಂಶ ಪ್ರಕಟಿಸಬೇಕು. ತಕ್ಷಣವೇ 2021-22ನೇ ಶೈಕ್ಷಣಿಕ ವೇಳಾಪಟ್ಟಿಯನ್ನು ಬಿಡುಗಡೆ ಮಾಡಬೇಕು. ಮೇ.1ರಿಂದ ಶೈಕ್ಷಣಿಕ ವರ್ಷವನ್ನು ಆರಂಭಿಸಬೇಕು" ಎಂದು ಮನವಿ ಮಾಡಿದೆ.