ಶಿವಮೊಗ್ಗ, ಏ.05 (DaijiworldNews/HR): "ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಂಗ್ರೆಸ್ ಪಕ್ಷದ ಲೆಕ್ಕದಲ್ಲೂ ಇಲ್ಲ, ಬುಕ್ ನಲ್ಲೂ ಇಲ್ಲ. ಅವರ ಪರಿಸ್ಥಿತಿ ತೊಟ್ಟಿಯಲ್ಲಿರುವ ಕಸದಂತಾಗಿದೆ, ಹಾಗಾಗಿ ಮೊದಲು ಅವರು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು" ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಕೆ.ಎಸ್.ಈಶ್ವರಪ್ಪ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಈಶ್ವರಪ್ಪ, "ಮೈಸೂರು ಮೇಯರ್, ಉಪ ಮೇಯರ್ ಚುನಾವಣೆ ಸಂದರ್ಭ, ತಮ್ಮ ಮಾತು ಕೇಳಲಿಲ್ಲ ಎಂದು ನಾಲ್ಕು ದಿನ ಹೋಗಿ ರೆಸಾರ್ಟ್ ನಲ್ಲಿ ಕೂತಿದ್ದು, ಸಿದ್ದರಾಮಯ್ಯ ಅವರಿಗೆ ಅನ್ಯಾಯವಾಗಿದೆ ಎಂದು ರಮೇಶ್ ಕುಮಾರ್ ಅವರೂ ಹೇಳಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಅವರ ಸ್ಥಿತಿ ಹೇಗಿದೆ ಅಂದರೆ ತೊಟ್ಟಿಯಲ್ಲಿರುವ ಕಸದಂತಾಗಿದ್ದು, ಮೊದಲು ಅವರು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು" ಎಂದರು.
ಇನ್ನು "ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಮೇಲೆ ಸಿದ್ದರಾಮಯ್ಯ ಅವರಿಗೆ ಹುಚ್ಚು ಹಿಡಿದಿದ್ದು, ಕರ್ನಾಟಕದಲ್ಲಿ ಇಷ್ಟೊಂದು ಅಭಿವೃದ್ಧಿ ಆಗುತ್ತಿರುವುದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಇದರಿಂದ ಸಿದ್ದರಾಮಯ್ಯ ಅವರಿಗೆ ತಲೆಕೆಟ್ಟು ಹೋಗಿದೆ" ಎಂದು ಹೇಳಿದ್ದಾರೆ.