ನವದೆಹಲಿ, ಎ.05 (DaijiworldNews/PY): "ಭದ್ರತಾ ಸಿಬ್ಬಂದಿಗಳ ಸಾವಿಗೆ ಕಾರಣವಾದ ಛತ್ತೀಸ್ಘಡದ ನಕ್ಸಲ್ ಕಾರ್ಯಾಚರಣೆ ಅಸಮರ್ಥವಾಗಿದ್ದು, ರೂಪುರೇಷೆ ಸಹ ಸಮರ್ಪಕವಾಗಿರಲಿಲ್ಲ" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ನಮ್ಮ ಸೈನಿಕರು ಎಂದಿಗೂ ಕೂಡಾ ಬಂದೂಕುಗಳಿಗೆ ಆಹಾರವಾಗಿ ಸ್ವ-ಇಚ್ಛೆಯಿಂದ ಹುತಾತ್ಮರಾಗುವ ಮನಸ್ಥಿತಿಯುಳ್ಳವರಲ್ಲ" ಎಂದು ತಿಳಿಸಿದ್ದಾರೆ.
ಟ್ವೀಟ್ನಲ್ಲಿ ಸಿಆರ್ಪಿಎಫ್ ಮಹಾನಿರ್ದೇಶಕ ಕುಲದೀಪ್ ಸಿಂಗ್ ಅವರ ಹೇಳಿಕೆ ಉಲ್ಲೇಖಿಸಿದ್ದು, "ಕಾರ್ಯಾಚರಣೆಯಲ್ಲಿ ಗುಪ್ತದಳದ ವೈಫಲ್ಯವಿಲ್ಲ. ಮೃತರ ಪ್ರಮಾಣ 1:1 ಅನುಪಾತ ಎಂದಾದರೆ ಈ ಕಾರ್ಯಾಚರಣೆ ಸರಿಯಾಗಿ ರೂಪಿಸಿಲ್ಲ ಹಾಗೂ ಅಸಮರ್ಥ ಕಾರ್ಯಾಚರಣೆ ಎಂದು ಅರ್ಥ ಅಲ್ಲವೇ?" ಎಂದು ಕೇಳಿದ್ದಾರೆ.
"ಎ.3ರ ಶನಿವಾರ ಛತ್ತೀಸ್ಘಡದ ಸುಕ್ಮಾ ಹಾಗೂ ಬಿಜಾಪುರ ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ಭದ್ರತಾ ಸಿಬ್ಬಂದಿ ಹಾಗೂ ಯೋಧರ ಮೇಲೆ ನಕ್ಸಲರು ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ 22 ಮಂದಿ ಭದ್ರತಾ ಸಿಬ್ಬಂದಿ ಸಿಆರ್ಪಿಎಫ್ನ ಯೋಧರು ಹುತಾತ್ಮರಾಗಿದ್ದು, 31 ಭದ್ರತಾ ಸಿಬ್ಬಂದಿಗಳು ಗಾಯಗೊಂಡಿದ್ದರು. ಸಿಆರ್ಪಿಎಫ್ ಅಧಿಕಾರಿಯೋರ್ವರು ನಾಪತ್ತೆಯಾಗಿದ್ದಾರೆ" ಎಂದು ಅಧಿಕಾರಿಗಳು ಹೇಳಿದ್ದಾರೆ.