ನವದೆಹಲಿ, ಎ.05 (DaijiworldNews/MB) : ಕೊರೊನಾ ಸೋಂಕಿ ನಿರ್ವಹಣೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಅವರದ್ದೆ ಪಕ್ಷದವರಾದ ಸಂಸದ ಸುಬ್ರಮಣಿಯನ್ ಸ್ವಾಮಿ ಅವರು ಟ್ವೀಟ್ ಮೂಲಕ ಪರೋಕ್ಷವಾಗಿ ಟಾಂಗ್ ನೀಡಿದ್ದು ಈ ಟ್ವೀಟ್ ಬಿಜೆಪಿಯವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಬಿಜೆಪಿಯವರೇ ಆದ ಸುಬ್ರಮಣಿಯನ್ ಸ್ವಾಮಿ ಅವರು ತನ್ನ ಪಕ್ಷ ಹಾಗೂ ತನ್ನದೇ ಪಕ್ಷದವರಾದ ಪ್ರಧಾನಿ ಮೋದಿ ಅವರ ವಿರುದ್ದ ವಾಗ್ದಾಳಿ ನಡೆಸಿರುವುದು ಇದು ಮೊದಲೇನಲ್ಲ. ಆದರೆ ಈಗ ದೇಶದಲ್ಲಿ ಕೊರೊನಾ ಸೋಂಕು ಏರಿಕೆ ವಿಚಾರದಲ್ಲಿ ಪರೋಕ್ಷವಾಗಿ ಸುಬ್ರಮಣಿಯನ್ ಸ್ವಾಮಿ ಅವರು ಬಿಜೆಪಿಯನ್ನು ಟೀಕಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಕೊರೊನಾ ಸೋಂಕು ಏರಿಕೆ ವಿಚಾರವಾಗಿ ಪರೋಕ್ಷವಾಗಿ ಸ್ವಪಕ್ಷ ಬಿಜೆಪಿಗೆ ಟಾಂಗ್ ನೀಡಿರುವ ಸುಬ್ರಮಣಿಯನ್ ಸ್ವಾಮಿ, ''2020ರ ಏಪ್ರಿಲ್ ಮಧ್ಯದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ಪ್ರಕರಣಗಳು ದಿನವೂ 1 ಲಕ್ಷದಷ್ಟು ವರದಿಯಾಗುತ್ತಿತ್ತು. ನವೆಂಬರ್ ವೇಳೆಗೆ 10,000ಕ್ಕೆ ಇಳಿಯಿತು. ಅಂಧಭಕ್ತರು ಮತ್ತು ಗಂಧ (ಕೊಳಕು) ಭಕ್ತರು ಅದರ ಮನ್ನಣೆ ಯಾರಿಗೆ ನೀಡಿದ್ದರು? ಈಗ ಪ್ರಕರಣಗಳು ಮತ್ತೆ 100, 000 ಕ್ಕೆ ಏರಿದೆ. ಹಾಗಾದರೆ ಈಗ ಯಾರು ಕ್ರೆಡಿಟ್ ಪಡೆಯುತ್ತಾರೆ?'' ಎಂದು ಪ್ರಶ್ನಿಸಿದ್ದಾರೆ.
ಸ್ವಾಮಿ ಅವರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ ಓರ್ವರು, ''ಬೇಸಿಗೆ ಕಾಲದಲ್ಲಿ ಮಾತ್ರವೇ ಕೊರೊನಾ ಸೋಂಕು ತೀವ್ರ ಏರಿಕೆಯಾಗುತ್ತದೆ. ಇದಕ್ಕೆ ಹವಾಮಾನ ಕಾರಣ'' ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮಿ ಅವರು, ''ಅಂಧಭಕ್ತರು ಮತ್ತು ಗಂಧಭಕ್ತರಿಗೆ ಅಗತ್ಯವಾಗಿರುವ ನೆಪವೊಂದು ನಿಮಗೆ ಸಿಕ್ಕಿದೆ'' ಎಂದು ಲೇವಡಿ ಮಾಡಿದ್ದಾರೆ.