ಬೆಳಗಾವಿ, ಏ 5 (DaijiworldNews/MS): ದಿನದಿನದಿಂದ ದಿನಕ್ಕೆ ತಿರುವು ಪಡೆಯುತ್ತಿರುವ ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಸಿಡಿ ಪ್ರಕರಣದಲ್ಲಿ ಎಸ್ ಐ ಟಿ ವಿಚಾರಣೆಗೆ ಗೈರಾಗಿದ್ದ ಶಾಸಕ ರಮೇಶ್ ಜಾರಕಿಹೊಳಿ ಗೆ ಕೊರೊನಾ ಪಾಸಿಟಿವ್ ಆಗಿದೆ ಎಂದು ಬೆಳಗಾವಿಯಲ್ಲಿ ಸಚಿವ ಭೈರತಿ ಬಸವರಾಜು ಹೇಳಿದ್ದಾರೆ.
ಸಂಸದ ಸುರೇಶ್ ಅಂಗಡಿ ಅವರ ನಿಧನದಿಂದ ತೆರವಾದ ಬೆಳಗಾವಿ ಲೋಕಸಭಾ ಕ್ಷೇತ್ರ ಸ್ಥಾನದ ಉಪಚುನಾವಣೆಯ ಪ್ರಚಾರಕ್ಕಾಗಿ ತೆರಳುವ ಸಂದರ್ಭ " ಪ್ರಚಾರಕ್ಕೆ ಕರೆಯಲು ನಾನು ರಮೇಶ್ ಜಾರಕಿಹೊಳಿ ಅವರಿಗೆ ಫೋನ್ ಮಾಡಿದ್ದೆ ಆದರೆ ಈ ವೇಳೆ ಕೊರೊನಾ ಪಾಸಿಟಿವ್ ಆಗಿರುವ ವಿಚಾರವನ್ನು ನನಗೆ ತಿಳಿಸಿದ್ದಾರೆ. ಹೀಗಾಗಿ ಪ್ರಚಾರಕ್ಕೆ ಬರೋದು ಡೌಟ್" ಎಂದು ಹೇಳುವ ಮೂಲಕ ಸಿಡಿ ಕೇಸ್ಗೆ ಮತ್ತಷ್ಟು ಟ್ವಿಸ್ಟ್ ನೀಡಿದ್ದಾರೆ.
ಈಗಾಗಲೇ ಎಸ್ಐಟಿ ವಿಚಾರಣೆಗೂ ಅನಾರೋಗ್ಯ ನೆಪವೊಡ್ಡಿ ತಪ್ಪಿಸಿಕೊಳ್ಳುತ್ತಿರುವ ರಮೇಶ್ ಜಾರಕಿಹೊಳಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಈಗಾಗಲೇ ಎಸ್ಐಟಿ ತನಿಖಾಧಿಕಾರಿಗಳು ರಮೇಶ್ ಜಾರಕಿಹೊಳಿಗೆ ನೋಟಿಸ್ ನೀಡಿ ಏ 5 ರ ಸೋಮವಾರ ಬೆಳಗ್ಗೆ 11ರ ಒಳಗೆ ವಿಚಾರಣೆಗೆ ಹಾಜರಾಗಬೇಕೆಂದು ತಿಳಿಸಿದ್ದಾರೆ.
ಕೊರೊನಾ ಪಾಸಿಟಿವ್ ಎಂದು ಭೈರತಿ ಬಸವರಾಜು ಅವರಿಗೆ ತಿಳಿಸಿರುವುದನ್ನು ನೋಡಿದರೆ ಸದ್ಯ ಕೊರೊನಾ ನಿಯಮಾವಳಿಗಳನ್ನು ಪಾಲಿಸಿ, ಸೂಕ್ತ ಚಿಕಿತ್ಸೆ ಪಡೆದು ಮತ್ತೆ ತನಿಖೆಗೆ ಹಾಜರಾಗಲು ಕನಿಷ್ಠ 15 ದಿನಗಳಾಗುವ ಸಾಧ್ಯತೆ ಇದೆ.