ಚೆನ್ನೈ, ಎ.05 (DaijiworldNews/PY): 10 ಹಾಗೂ 12ನೇ ತರಗತಿಯ ಸಿಬಿಎಸ್ಇ ನಕಲಿ ವಾರ್ಷಿಕ ವೇಳಾಪಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದು ನಕಲಿ ಹಾಗೂ ಸುಳ್ಳು ವೇಳಾಪಟ್ಟಿ ಎಂದು ಸಿಬಿಎಸ್ಇ ಸ್ಪಷ್ಟನೆ ನೀಡಿದೆ.
ಸಾಂದರ್ಭಿಕ ಚಿತ್ರ
ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿರುವ ಸಿಬಿಎಸ್ಇ, "ಮೇ 4 ರಿಂದ ಜೂನ್ 10ರವರೆಗೆ ನಿಗದಿಯಂತೆ ಪರೀಕ್ಷೆಗಳು ನಡೆಯಲಿವೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೇಳಾಪಟ್ಟಿ ಕಳೆದ ವರ್ಷದ ಪರೀಕ್ಷೆಯ ಸುತ್ತೋಲೆಯಾಗಿದೆ. ವಿದ್ಯಾರ್ಥಿಗಳು ಈ ನಕಲಿ ಹಾಗೂ ಸುಳ್ಳು ವೇಳಾಪಟ್ಟಿಯನ್ನು ಗಣನೆಗೆ ತೆಗೆದುಕೊಳ್ಳಬೇಡಿ" ಎಂದು ಸೂಚನೆ ನೀಡಿದೆ.
"ಸಿಬಿಎಸ್ಇ 10 ಹಾಗೂ 12ನೇ ತರಗತಿಯ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕಳೆದ ವರ್ಷದ ವೇಳಾಪಟ್ಟಿಯನ್ನು ಹಬ್ಬಿಸಿ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿಸಲು ಯತ್ನಿಸುತ್ತಿದ್ದಾರೆ. ಕಳೆದ ವರ್ಷದ ಈ ಹಳೆಯ ಸುತ್ತೋಲೆಯನ್ನು ವಿದ್ಯಾರ್ಥಿಗಳು ನಿರ್ಲಕ್ಷಿಸಬೇಕು ಹಾಗೂ ದಾರಿ ತಪ್ಪಬಾರದು. ಮಂಡಳಿಯು ಅಂತಹ ಯಾವುದೇ ಮಾಹಿತಿಯನ್ನು ನೀಡಿಲ್ಲ" ಎಂದು ತಿಳಿಸಿದೆ.
12 ಹಾಗೂ 10ನೇ ತರಗತಿಗೆ ವಾರ್ಷಿಕ ಪರೀಕ್ಷೆ ಜುಲೈ 11 ಹಾಗೂ 13ರಂದು ನಡೆಯಲಿದೆ ಎಂದು ನಕಲಿ ವೇಳಾಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಜುಲೈ 15ರಂದು ಫಲಿತಾಂಶ ಪ್ರಕಟವಾಗುವ ನಿರೀಕ್ಷೆ ಇದೆ.