ಶ್ರೀನಗರ, ಎ.05 (DaijiworldNews/PY): ಜಮ್ಮು-ಕಾಶ್ಮೀರದಲ್ಲಿ ಉಗ್ರ ಕೃತ್ಯಗಳಿಗೆ ಸಂಚು ರೂಪಿಸಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಕಮಾಂಡರ್ನನ್ನು ಜಮ್ಮು ಪೊಲೀಸರ ವಿಶೇಷ ಕಾರ್ಯಾಚರಣೆ ತಂಡ ಬಂಧಿಸಿದೆ.
ಸಾಂದರ್ಭಿಕ ಚಿತ್ರ
ಬಂಧಿತ ಉಗ್ರನನ್ನು ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯ ಯಾರಿಪೋರಾ ಗ್ರಾಮದ ನಿವಾಸಿ ಉಮೈರ್ ಅಲಿಯಾಸ್ ಅಬ್ದುಲ್ಲಾ ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಜಮ್ಮು ವಲಯದ ಪೊಲೀಸ್ ಮುಖ್ಯಸ್ಥ ಮುಖೇಶ್ ಸಿಂಗ್, "ಬಂಧಿತ ಉಗ್ರ ಇಸ್ಲಾಮಿಕ್ ಸ್ಟೇಟ್ ಸಂಘಟನೆಗೆ ಸೇರಿದವನಾಗಿದ್ದು, ಆತ ಕಾಶ್ಮೀರ ಪ್ರಾಂತ್ಯದ ಕಮಾಂಡರ್ ಆಗಿ ನೇಮಕವಾಗಿದ್ದ. ಆತನನ್ನು ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಜಜ್ಜರ್ ಕೋಟ್ಲಿಯಲ್ಲಿ ಬಂಧಿಸಲಾಗಿದೆ" ಎಂದು ತಿಳಿಸಿದ್ದಾರೆ.
ಬಂಧಿತನಿಂದ ಒಂದು ಪಿಸ್ತೂಲ್, ಎಂಟು ಸುತ್ತು ಗುಂಡುಗಳು ಸೇರಿದಂತೆ 1.13 ಲಕ್ಷ. ರೂ. ಅನ್ನು ವಶಪಡಿಸಿಕೊಳ್ಳಲಾಗಿದೆ.
"ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಶಸ್ತ್ರಾಸ್ತ್ರ ಹಾಗೂ ಹಣ ಪಡೆದುಕೊಂಡಿದ್ದ ಎಂದು ವಿಚಾರಣೆಯ ಸಂದರ್ಭ ತಿಳಿದುಬಂದಿದೆ" ಎಂದು ಅಧಿಕಾರಿ ತಿಳಿಸಿದ್ದಾರೆ.