ಕೋಲ್ಕತ್ತಾ, ಎ.05 (DaijiworldNews/MB) : ಪಶ್ಚಿಮ ಬಂಗಾಳದಲ್ಲಿ ಒಟ್ಟು ಎಂಟು ಹಂತಗಳಲ್ಲಿ ಮತದಾನ ನಡೆಯಲಿದ್ದು ಈಗಾಗಲೇ ಎರಡು ಹಂತದ ಚುನಾವಣೆ ನಡೆದಿದೆ. ಈ ನಡುವೆ ಬಿಜೆಪಿ ಹಾಗೂ ಟಿಎಂಸಿ ಮುಖಂಡರ ನಡುವಿನ ವಾಕ್ಸಮರ ನಡೆಯುತ್ತಲ್ಲೇ ಇದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ದ ವಾಗ್ದಾಳಿ ನಡೆಸಿರುವ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ''ನಾನು ಏಳು ಬಾರಿ ಸಂಸದೆಯಾಗಿದ್ದೇನೆ. ಆದರೆ ಇಂತಹ ಕೆಟ್ಟ ಪ್ರಧಾನಿ, ಗೃಹ ಸಚಿವರನ್ನು ಎಂದಿಗೂ ನೋಡಿಲ್ಲ'' ಎಂದು ಟೀಕಿಸಿದ್ದಾರೆ.
ಹೂಗ್ಲಿಯ ಫುರೂಶುರಾ ಸಮಾವೇಶದಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ಅವರು, ''ಬಿಜೆಪಿಯವರು ಬಂಗಾಳದಲ್ಲಿ ಅಭಿವೃದ್ಧಿ ಕಾರ್ಯ ನಡೆದಿಲ್ಲ. ನಾವು ಬದಲಾವಣೆಗಾಗಿ ಬಂದಿದ್ದೇವೆ ಎಂದು ಸುಳ್ಳನ್ನು ಹೇಳಿಕೊಂಡು ಮತಯಾಚನೆ ಮಾಡುತ್ತಿದ್ದಾರೆ. ಕೊಲೆ ಮಾಡುವವರು ಸುಳ್ಳು ಹೇಳಿಕೊಂಡು ಮತ ಪಡೆಯುವವರು ಈಗ ಬಂಗಾಳಕ್ಕೆ ಆಗಮಿಸಿದ್ದಾರೆ'' ಎಂದು ಬಿಜೆಪಿಯ ವಿರುದ್ದ ಹರಿಹಾಯ್ದರು.
''ಏಳು ಬಾರಿ ಸಂಸದೆಯಾಗಿದ್ದ ನಾನು ಇಂತಹ ಕೆಟ್ಟ ಪ್ರಧಾನಿ, ಗೃಹ ಸಚಿವರನ್ನು ನೋಡಿಲ್ಲ'' ಎಂದು ಹೇಳಿದ ಅವರು, ''ಚುನಾವಣೆಯ ಹೋರಾಟದಿಂದ ನಾನಾಗಿಯೇ ಹಿಂದಕ್ಕೆ ಸರಿಯುವ ಮನಸ್ಸು ಮಾಡಬೇಕೇ ಹೊರತು ಬೇರೆ ಯಾರೂ ನನ್ನನ್ನು ಹಿಂದಕ್ಕೆ ಸರಿಸಲಾಗದು'' ಎಂದೂ ಹೇಳಿದರು.