ಬೆಂಗಳೂರು, ಏ 5 (DaijiworldNews/MS): ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಸಿಡಿ ಪ್ರಕರಣದ ಸಂತ್ರಸ್ತೆ ಸತತ 5 ದಿನಗಳ ಎಸ್ ಐ ಟಿ ಯಿಂದ ವಿಚಾರಣೆ ಎದುರಿಸಿದ್ದು, ಆದರೆ ಚಳಿ ಜ್ವರ ಬಂದಿರುವ ಅತ್ಯಾಚಾರ ಆರೋಪಿಗೆ ಮಾತ್ರ ರಾಜಮಾರ್ಯಾದೆಯ ವಿಚಾರಣೆ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್ ದೂರಿದೆ.
ಈ ಬಗ್ಗೆ ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಟ್ವೀಟರ್ ಪೇಜ್ ನಲ್ಲಿ ಟ್ವೀಟ್ ಮಾಡಿದ್ದು, "ರಮೇಶ್ ಜಾರಕಿಹೊಳಿಯ ಅತ್ಯಾಚಾರ ಪ್ರಕರಣವೊಂದೇ ಸಾಕು ಬಿಜೆಪಿ ಆಡಳಿತದ ನಿಜಬಣ್ಣ ತಿಳಿಯಲು.ದೂರು ನೀಡಿದ ಸಂತ್ರಸ್ತೆಯನ್ನು ಆರೋಪಿಯಂತೆ ಸತತವಾಗಿ ವಿಚಾರಣೆ ನಡೆಸಲಾಗುತ್ತಿದೆ. ಅತ್ಯಾಚಾರ ಆರೋಪಿಯನ್ನು ರಾಜಮರ್ಯಾದೆಯಲ್ಲಿ ನೆಪಮಾತ್ರದ ವಿಚಾರಣೆ ನಡೆಸಲಾಗಿದೆ".
"ಈ ಪ್ರಕರಣದಿಂದ ಚಳಿ ಜ್ವರ ಬಂದಿರುವ ಅತ್ಯಾಚಾರ ಆರೋಪಿಗೆ ನಿಜಕ್ಕೂ ಅನಾರೋಗ್ಯವೋ ಅಥವಾ ತಲೆಮರೆಸಿಕೊಳ್ಳುವ ತಂತ್ರವೋ? ಪೊಲೀಸರೂ ಆರೋಪಿ ತಲೆಮರೆಸಿಕೊಳ್ಳುವ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.ಆರೋಪಿಯ ಮೊಬೈಲ್ನ್ನು ಹಲವು ದಿನಗಳವರೆಗೆ ಪೊಲೀಸರು ವಶಪಡಿಸಿಕೊಂಡಿಲ್ಲ, ಸಾಕ್ಷ್ಯ ನಾಶಕ್ಕೆ ಸಾಕಷ್ಟು ಸಮಯ ಬೇಕಿತ್ತೋ ಏನೋ!" ಎಂದು ತನಿಖೆಯ ವೈಖರಿ ಬಗ್ಗೆ ವ್ಯಂಗ್ಯವಾಡಿದೆ.
ಈ ನಡುವೆ ಸಂತ್ರಸ್ತೆ ಯುವತಿ ಎಸ್ ಐ ಟಿ ಮೇಲೆ ರಾಜಕೀಯ ಒತ್ತಡವಿದ್ದು, ತಾನು ವಾಸವಿದ್ದ ಪಿಜಿ ಮೇಲೆ ದಾಳಿ ಮಾಡಿ ಸಾಕ್ಷ್ಯಗಳನ್ನು ನಾಶ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ.