ಬೆಂಗಳೂರು, ಏ.04 (DaijiworldNews/HR): "ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರವು ಎಸ್ಐಟಿ ಮೇಲೆ ಒತ್ತಡ ಹೇರಿ ತನಿಖೆಯ ಹಾದಿ ತಪ್ಪಿಸುತ್ತಿದೆ" ಎಂದು ಯುವತಿ ಪರ ವಕೀಲ ಜಗದೀಶ್ ಆರೋಪಿಸಿದ್ದಾರೆ.
ಈ ಕುರಿತು ಸಿಡಿ ಲೇಡಿ ಬರೆದ ಪತ್ರವನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ಗೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಎಸ್ಐಟಿ ತನಿಖೆ ಹಾದಿ ತಪ್ಪಿಸಲಾಗುತ್ತಿದ್ದು, ಅಧಿಕಾರಿಗಳು ಜನರನ್ನು ಫೂಲ್ ಮಾಡುತ್ತಿದ್ದು, ಇದರ ಬದಲು ಎಸ್ಐಟಿಯನ್ನು ಮುಚ್ಚಿಬಿಡಿ" ಎಂದರು.
ಇನ್ನು "ನನಗೆ ಎಸ್ಐಟಿ ತನಿಖೆ ಮೇಲೆ ನಂಬಿಕೆ ಬರುತ್ತಿಲ್ಲ, ನನ್ನನ್ನೇ ಆರೋಪಿಯಂಬಂತೆ ನೋಡುತ್ತಿದ್ದಾರೆ ಎಂದು ಸಂತ್ರಸ್ತ ಯುವತಿ ದೂರು ನೀಡುತ್ತಿದ್ದಾಳೆ" ಎಂದಿದ್ದಾರೆ.
"ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುವುದನ್ನು ಬಿಟ್ಟು ಅಧಿಕಾರಿಗಳು ಆತನನ್ನು ಓಡಾಡಲು ಬಿಟ್ಟಿದ್ದು, ಸರ್ಕಾರ ಆತನಿಗೆ ರಕ್ಷಣೆ ನೀಡುತ್ತಿದೆ. ಸಂತ್ರಸ್ತೆಯನ್ನೇ ಆರೋಪಿ ಎಂಬಂತೆ ಬಿಂಬಿಸಿ ವಿಚಾರಣೆ ಮೇಲೆ ವಿಚಾರಣೆ ನಡೆಸಲಾಗುತ್ತಿದೆ" ಎಂದು ಆರೋಪಿಸಿದ್ದಾರೆ.