ಲಕ್ನೋ, ಎ.04 (DaijiworldNews/PY): ಅಯೋಧ್ಯೆ ಪಟ್ಟಣದ ಹನುಮಾನ್ಗಿರಿ ದೇಗುಲದ ಸಾಧುವೊಬ್ಬರನ್ನು ಕಲ್ಲುಗಳಿಂದ ಹೊಡೆದು ಹತ್ಯೆಗೈದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತಪಟ್ಟ ಸಾಧುವನ್ನು ಮಹಾಂತ ಕನ್ಹಯ್ಯಾ ದಾಸ್ ಎಂದು ಗುರುತಿಸಲಾಗಿದೆ.
"ಇವರು ಅಯೋಧ್ಯೆಯ ಹನುಮಾನ್ಗಿರಿ ದೇಗುಲದಲ್ಲಿದ್ದರು. ಎ.3ರ ಶನಿವಾರ ರಾತ್ರಿ ಅವರನ್ನು ಕಲ್ಲುಗಳಿಮದ ಹೊಡೆದು ಹತ್ಯೆ ಮಾಡಲಾಗಿದೆ. ರವಿವಾರ ಮುಂಜಾನೆ ದೇಗುಲದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಾಧು ಅವರ ದೇಹ ಪತ್ತೆಯಾಗಿದೆ" ಎಂದು ಪೊಲೀಸರು ಹೇಳಿದ್ದಾರೆ.
ಹತ್ಯೆಗೆ ಸಂಬಂಧಿಸಿದಂತೆ ಕನ್ಹಯ್ಯಾ ದಾಸ್ ಅವರ ಗುರು ಭಾಯ್ ಆಗಿರುವ ಗೋಲು ದಾಸ್ ಎನ್ನುವವರನ್ನು ಪೊಲೀಸರು ಬಂಧಿಸಿದ್ದಾರೆ.
ಕನ್ಹಯ್ಯಾ ದಾಸ್ ಹಾಗೂ ಗೋಲು ದಾಸ್ ಅವರ ಮಧ್ಯೆ ಅಯೋಧ್ಯೆಯಲ್ಲಿರುವ ಸ್ವಲ್ಪ ಜಮೀನು ಹಾಗೂ ಮನೆಗೆ ಸಂಬಂಧಿಸಿದಂತೆ ವೈಷಮ್ಯ ಇತ್ತು ಎಂದು ಮೂಲಗಳು ತಿಳಿಸಿವೆ.
ಮಹಾಂತ ಕನ್ಹಯ್ಯಾ ದಾಸ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನಾಗಾ ಸಾಧುಗಳ ಗುಂಪು ಆಶ್ರಮಕ್ಕೆ ಭೇಟಿ ನೀಡಿದ್ದು, "ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು" ಎಂದು ಒತ್ತಾಯಿಸಿದೆ.
"ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದೆ. ಹತ್ಯೆಯ ಹಿಂದಿನ ಉದ್ದೇಶ ಏನೆಂದು ತಿಳಿಯಲು ಪ್ರಯತ್ನಿಸಲಾಗುತ್ತಿದೆ" ಎಂದು ಪೊಲೀಸರು ಹೇಳಿದ್ದಾರೆ.