ಕೋಲ್ಕತ್ತ, ಏ.04 (DaijiworldNews/HR): ಬಿಜೆಪಿಯು ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದರೆ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು (ಎನ್ಆರ್ಸಿ) ಜಾರಿಗೊಳಿಸುವುದಿಲ್ಲ. ಆದರೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಅನುಷ್ಠಾನಗೊಳಿಸಲಿದ್ದೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಂಗಾಳ ಉಸ್ತುವಾರಿ ಕೈಲಾಶ್ ವಿಜಯವರ್ಗೀಯ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಬಿಜೆಪಿಯವರು ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಚುನಾವಣೆ ನಂತರ ಸಿಎಎ ಅನುಷ್ಠಾನಗೊಳಿಸುವುದನ್ನು ಎದುರು ನೋಡುತ್ತಿದ್ದು, ಇದು ನಮ್ಮ ಪಾಲಿಗೆ ಪ್ರಮುಖ ವಿಷಯವಾಗಿದ್ದು, ಹಿಂಸೆಗೊಳಗಾದ ನಿರಾಶ್ರಿತರಿಗೆ ಪೌರತ್ವ ನೀಡಲು ಶ್ರಮಿಸುತ್ತಿದ್ದೇವೆ. ಆದರೆ ಚುನಾವಣೆಯಲ್ಲಿ ಗೆದ್ದರೂ ಎನ್ಆರ್ಸಿ ಜಾರಿಗೊಳಿಸುವ ಯಾವುದೇ ಯೋಜನೆ ನಮ್ಮಲ್ಲಿಲ್ಲ" ಎಂದರು.
ಇನ್ನು ಚುನಾವಣಾ ಆಯೋಗವು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ ಎಂಬ ಮಮತಾ ಬ್ಯಾನರ್ಜಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, "ಈ ಅಸಂಬದ್ಧ ವಾದಗಳಿಂದ ಯಾವುದೇ ನೆರವಾಗುವುದಿಲ್ಲ. ಕುತೂಹಲಕಾರಿ ಅಂಶವೆಂದರೆ ಮಮತಾ ಚುನಾವಣೆ ಗೆದ್ದಾಗ ಯಾವುದೇ ಸಮಸ್ಯೆಯಿರಲಿಲ್ಲ. ಚುನಾವಣಾ ಗೆದ್ದಾಗ ಎಲ್ಲವೂ ಸರಿಯಾಗಿಯೇ ಇರುತ್ತದೆ. ಆದರೆ ಒಮ್ಮೆ ಸೋಲನ್ನು ಗ್ರಹಿಸಲು ಪ್ರಾರಂಭಿಸಿದ ಬಳಿಕ ನೀವು ಚುನಾವಣಾ ಆಯೋಗದ ವಿರುದ್ಧ ಆರೋಪ ಹೊರಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.