ಬೆಂಗಳೂರು, ಎ.04 (DaijiworldNews/PY): "ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನನಗೆ ಬೈಯ್ಯುವ ಬದಲು, ಮೊದಲು ಬಸನಗೌಡ ಪಾಟೀಲ ಯತ್ನಾಳ್ಗೆ ಬೈದು ಬಾಯಿ ಮುಚ್ಚಿಸಲಿ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಅನ್ನಭಾಗ್ಯ ವಿಚಾರದ ಬಗ್ಗೆ ಮಾತನಾಡುವ ಸಂದರ್ಭ ಸರ್ಕಾರಿ ದುಡ್ಡು ಯಾರಪ್ಪನ ಮನೆ ದುಡ್ಡಲ್ಲ ಎಂದು ಹೇಳಿದ್ದೆ. ಅದು ಬೈಗುಳವೇ?. ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನನಗೆ ಬೈಯ್ಯುವ ಬದಲು, ಮೊದಲು ಬಸನಗೌಡ ಪಾಟೀಲ ಯತ್ನಾಳ್ ಅವರ ಬಾಯಿ ಮುಚ್ಚಿಸಲಿ. ನನಗೂ ಕೂಡಾ 40 ವರ್ಷದ ಅನುಭವ ಇದೆ. ಅನ್ನಭಾಗ್ಯದ ಹಣ ಯಡಿಯೂರಪ್ಪ ಅವರ ಮನೆ ಹಣವಲ್ಲ. ಅದು ಸರ್ಕಾರದ ಹಣ ಎಂದು ಹೇಳುವುದು ಅಸಂವಿಧಾನಿಕ ಪದವೇ?" ಎಂದು ಕೇಳಿದ್ದಾರೆ.
ಸಿಡಿ ಪ್ರಕರಣದ ಯುವತಿ ಮಾಜಿ ಸಚಿವ ಡಿ.ಸುಧಾಕರ್ ಸಂಪರ್ಕ ಮಾಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, "ನನಗೆ ಆ ವಿಚಾರ ಯಾವುದು ಎಂದು ತಿಳಿದಿಲ್ಲ. ಗೊತ್ತಿಲ್ಲದ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ" ಎಂದಿದ್ದಾರೆ.
ಕೊರೊನಾ ನಿಯಮ ಬದಲಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ವಿಚಾರದ ಬಗ್ಗೆ ಈವರೆಗೆ ವಿಪಕ್ಷದವರನ್ನು ಕರೆದು ಮಾತನಾಡಿಲ್ಲ. ಅವರಿಗೆ ನಾನೇ ಪತ್ರ ಬರೆದಿದ್ದೇನೆ" ಎಂದು ಹೇಳಿದ್ದಾರೆ.
"ಎಸ್ಐಟಿ ಮೇಲೆ ಅವರಿಗೆ ನಂಬಿ ಇಲ್ಲ ಎಂದ ಮೇಲೆ ಬೇರೆ ತನಿಖೆ ಮಾಡಲಿ. ಈ ವಿಚಾರದ ಬಗ್ಗೆ ನಾನು ಸದನದಲ್ಲಿ ಪ್ರಸ್ತಾಪ ಮಾಡಿದ್ದೆ. ಎಸ್ಐಟಿ ಸರ್ಕಾರದ ಮುಷ್ಠಿಯಲ್ಲಿರಲಿದ್ದು, ಸಿಜೆ ತನಿಖೆ ಮಾಡುವಂತೆ ತಿಳಿಸಿದ್ದೆ" ಎಂದಿದ್ದಾರೆ.