ಕೋಲ್ಕತ್ತ, ಎ.04 (DaijiworldNews/MB) : ಪ್ರಧಾನಿ ನರೇಂದ್ರ ಮೋದಿ ಅವರು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಜಯಗಳಿಸಿದೆ ಎಂದು ಭವಿಷ್ಯ ನುಡಿದಿದ್ದು ಇದಕ್ಕೆ ತಿರುಗೇಟು ನೀಡಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ''ಭವಿಷ್ಯ ನುಡಿಯಲು ನೀವು (ಪ್ರಧಾನಿ ಮೋದಿ) ಯಾರೆಂದು ಯೋಚಿಸಿದ್ದೀರಿ? ದೇವರಾ, ಸೂಪರ್ ಹ್ಯೂಮನಾ'' ಎಂದು ಪ್ರಶ್ನಿಸಿದ್ದಾರೆ.
ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ''ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಶೀಘ್ರವೇ ಪಿಎಂ ಕಿಸಾನ್ ನಿಧಿ ಯೋಜನೆಯನ್ನು ಜಾರಿಗೆ ತರುತ್ತೇವೆ'' ಎಂದು ಹೇಳಿದ್ದರು. ಹಾಗೆಯೇ ವಾರಣಾಸಿಯಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಮೋದಿ ವಿರುದ್ದ ದೀದಿ ಸ್ಫರ್ಧಿಸಲಿದ್ದಾರೆ ಎಂದು ಟಿಎಂಸಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿ, ''ದೀದಿ ಈಗಾಗಲೇ ಸೋಲನ್ನು ಒಪ್ಪಿಕೊಂಡಿದ್ದಾರೆ'' ಎಂದು ವ್ಯಂಗ್ಯವಾಡಿದ್ದರು.
ಈಗ ಪ್ರಧಾನಿ ಹೇಳಿಕೆಗೆ ತಿರುಗೇಟು ನೀಡಿರುವ ಮಮತಾ ಬ್ಯಾನರ್ಜಿ, ''ಭವಿಷ್ಯ ನುಡಿಯಲು ಪ್ರಧಾನಿ ಮೋದಿ ಯಾರು? ಅವರು ದೇವರಾ, ಸೂಪರ್ ಹ್ಯೂಮನಾ'' ಎಂದು ಪ್ರಶ್ನಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಾರ್ಚ್ 27ರಿಂದ ಮತದಾನ ಆರಂಭವಾಗಿದ್ದು, ಏಪ್ರಿಲ್ 29ರ ವರೆಗೆ ನಡೆಯಲಿದೆ. ಒಟ್ಟು ಎಂಟು ಹಂತಗಳಲ್ಲಿ ಮತದಾನ ನಡೆಯುತ್ತಿದೆ.