ಬೆಂಗಳೂರು, ಏ.04 (DaijiworldNews/HR): ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾಗಿದ್ದ ಸಿಡಿ ಪ್ರಕರಣದ ಯುವತಿಯನ್ನು ವಿಚಾರಣೆ ಮಾಡುತ್ತಿದ್ದ ಎಸ್ಐಟಿ ಅಧಿಕಾರಿಗಳು, ಆಕೆ ವಾಸವಿದ್ದ ಪಿಜಿಯನ್ನ ಪಂಚನಾಮೆ ಮಾಡುವ ನೆಪದಲ್ಲಿ ರಮೇಶ್ ಅಣತಿಯಂತೆ ಅಲ್ಲಿದ್ದ ಪ್ರಮುಖ ಸಾಕ್ಷ್ಯ ನಾಶ ಮಾಡಲಾಗಿದೆಯೇ ಎಂದು ಸಿ.ಡಿ ಯುವತಿ ಆರೋಪ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.
ಸಿ.ಡಿ ಲೇಡಿ ಇಂದು ನಗರ ಪೊಲೀಸ್ ಆಯುಕ್ತರಿಗೆ ಎಸ್ಐಟಿ ಮತ್ತು ಜಾರಕಿಹೊಳಿ ವಿರುದ್ಧ ಬರೆದಿರುವ ಪತ್ರದಲ್ಲಿ ಸಾಕ್ಷ್ಯ ನಾಶದ ಬಗ್ಗೆ ಪ್ರಸ್ತಾಪಿಸಿದ್ದಾಳೆ ಎನ್ನಲಾಗಿದೆ.
ಇನ್ನು ರಮೇಶ್ ಕೊಟ್ಟಿರುವ ದೂರಿನಲ್ಲಿ ನನ್ನ ಹೆಸರು ಉಲ್ಲೇಖವಾಗಿಲ್ಲ. ಆದರೂ ನನ್ನ ಪಿಜಿ ಮೇಲೆ ದಾಳಿ ಮಾಡಿ ಅಲ್ಲಿ ಇರುವ ಸಾಕ್ಷ್ಯಗಳನ್ನು ನಾಶ ಮಾಡಿ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಸರ್ಕಾರದ ಒತ್ತಡಕ್ಕೆ ಎಸ್ಐಟಿ ಮಣಿದಿದೆ ಎಂದು ಸಿಡಿ ಯುವತಿ ಆರೋಪ ಮಾಡಿದ್ದಾಳೆ.