ಚಿತ್ರದುರ್ಗ, ಎ.04 (DaijiworldNews/MB) : ''ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರದ್ದು ಎಂದು ಹೇಳಲಾದ ಸಿ.ಡಿ. ಪ್ರಕರಣದಲ್ಲಿರುವ ಯುವತಿಗೂ ನನಗೂ ಯಾವುದೇ ಸಂಬಂಧವಿಲ್ಲ'' ಎಂದು ಮಾಜಿ ಸಚಿವ ಡಿ.ಸುಧಾಕರ್ ಹೇಳಿದ್ದಾರೆ.
ಚಳ್ಳಕೆರೆಯ ತಮ್ಮ ಮನೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಭಾನುವಾರ ಮಾತನಾಡಿದ ಅವರು, ''ಈ ಪ್ರಕರಣದಲ್ಲಿ ನನ್ನ ಹೆಸರು ಕೇಳಿ ಬಂದಿದ್ದು ಆಶ್ಚರ್ಯ ಮೂಡಿಸಿದೆ. ಯುವತಿಗೆ ನಾನು ಹಣ ವರ್ಗಾವಣೆ ಮಾಡಿದ್ದೇನೆ ಎಂದು ಹೇಳಿರುವುದು ಸುಳ್ಳು. ನಾನು ಯಾರಿಗೂ ಹಣ ನೀಡಿಲ್ಲ. ನಾನು ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಅವರೊಂದಿಗೆ ಸಂಪರ್ಕದಲ್ಲಿ ಇರುವ ಕಾರಣಕ್ಕೆ ಹೀಗೆ ಸಿಲುಕಿಸಲಾಗುತ್ತಿದೆ'' ಎಂದು ಹೇಳಿದ್ದಾರೆ.
ಹಾಗೆಯೇ ''ಈ ವಿಚಾರದ ಬಗ್ಗೆ ಎಸ್ಐಟಿ ನನ್ನನ್ನು ವಿಚಾರಣೆಗೆ ಕರೆದರೆ ನಾನು ಸಹಕಾರ ನೀಡುತ್ತೇನೆ. ಪ್ರತಿ ದಿನ ನೂರಾರು ಜನರು ನನಗೆ ಕರೆ ಮಾಡುತ್ತಾರೆ. ಯಾರು ಕರೆ ಮಾಡಿದ್ದು ಎಂದು ನನಗೆ ಗೊತ್ತಾಗಲ್ಲ'' ಎಂದು ಹೇಳಿದ ಅವರು, ''ಅಷ್ಟಕ್ಕೂ ನನಗೆ ಭಯವಿದ್ದರೆ ಮೊದಲೇ ನ್ಯಾಯಾಲಯಕ್ಕೆ ಮೊರೆ ಹೋಗುತ್ತಿದ್ದೆ'' ಎಂದು ಈಗಾಗಲೇ ಕಾನೂನು ಮೊರೆ ಹೋದ ಸಚಿವರುಗಳ ಕಾಲೆಳೆದರು'.