ಕಾನ್ಪುರ, ಎ.04 (DaijiworldNews/MB) : ಕಾನ್ಪುರ್ ದೇಹತ್ ಜಿಲ್ಲೆಯ ಅಕ್ಬರ್ಪುರ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ ಮೊಬೈಲ್ ಕರೆಯಲ್ಲೇ ನಿರತರಾಗಿದ್ದ ನರ್ಸ್ ಓರ್ವರು ಮಹಿಳೆಗೆ ಸತತ ಎರಡು ಬಾರಿ ಕೊರೊನಾ ಲಸಿಕೆ ನೀಡಿದ ಘಟನೆ ನಡೆದಿದೆ.
ಈ ಘಟನೆಯ ತನಿಖೆ ನಡೆಸಿದ ಕಾನ್ಪುರ ದೇಹತ್ ಮುಖ್ಯ ವೈದ್ಯಾಧಿಕಾರಿ (ಸಿಎಮ್ಒ) ಡಾ.ರಾಜೇಶ್ ಕಟಿಯಾರ್, "ಇಂದಿನಿಂದ, ಲಸಿಕೆ ನೀಡುವ ಎಲ್ಲಾ ನರ್ಸ್ಗಳಲ್ಲಿಯೂ ಮೊಬೈಲ್ ದೂರವಿಡಲು ಹೇಳಲಾಗಿದೆ" ಎಂದು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಮದೌಲಿ ಗ್ರಾಮದ ವಿಪಿನ್ ಅವರ ಪತ್ನಿ ಕಮಲೇಶ ಕುಮಾರಿ (50) ತನ್ನ ಮೊದಲ ಲಸಿಕೆ ಡೋಸ್ ಪಡೆಯಲು ಗುರುವಾರ ಅಕ್ಬರ್ಪುರ ಬ್ಲಾಕ್ನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿದ್ದರು. ಈ ಸಂದರ್ಭ ಫೋನ್ ಕರೆಯಲ್ಲಿ ನಿರತರಾಗಿದ್ದ ಎಎನ್ಎಂ ಅರ್ಚನಾ, ಎರಡು ಡೋಸ್ ಕೊರೊನಾ ಲಸಿಕೆ ನೀಡಿದ್ದಾರೆ.
ಮಹಿಳೆಯ ಕುಟುಂಬ ಸದಸ್ಯರು ಇದರ ಬಗ್ಗೆ ತಿಳಿದ ಕೂಡಲೇ ವಾಗ್ವಾದಕ್ಕೆ ಇಳಿದಿದ್ದು ನರ್ಸ್ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇನ್ನು ಕಮಲೇಶ ಕುಮಾರಿ ಅವರು ತನಗೆ ಎರಡು ಡೋಸ್ ಲಸಿಕೆ ನೀಡಿದ ಬಗ್ಗೆ ಪ್ರಶ್ನಿಸಿದಾಗ ಅರ್ಚನಾ ಕಮಲೇಶ ಕುಮಾರಿ ಅವರೊಂದಿಗೆ ಕೆಟ್ಟದಾಗಿ ವರ್ತಿಸಿ, ಬೆದರಿಸಿದ್ದಳು ಎಂದು ಕುಟುಂಬ ಆರೋಪಿಸಿದೆ.
ಹಿರಿಯ ಆರೋಗ್ಯ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಮಹಿಳೆಯ ಕುಟುಂಬ ಸದಸ್ಯರನ್ನು ಸಮಾಧಾನಪಡಿಸಿದ್ದು ಬಳಿಕ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಮುಖ್ಯ ವೈದ್ಯಕೀಯ ಅಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ನಿರ್ಲಕ್ಷ್ಯದ ಬಗ್ಗೆ ದೂರು ನೀಡಲಾಗಿದೆ.
ನಂತರ ಕಮಲೇಶ್ ಅವರನ್ನು ಪಿಎಚ್ಸಿಯ ಹಿರಿಯ ವೈದ್ಯಕೀಯ ಅಧಿಕಾರಿ ಡಾ.ರಾಕೇಶ್ ಕುಮಾರ್ ಅವರು ಸುಮಾರು ಒಂದೂವರೆ ಗಂಟೆಗಳ ಕಾಲ ನಿಗಾದಲ್ಲಿ ಇರಿಸಿ ಬಳಿಕ ಹಿಂತಿರುಗಿಸಿದ್ದಾರೆ. ಕಮಲೇಶ್ ಅವರ ಕೈಯಲ್ಲಿ ಊತ ಕಂಡು ಬಂದಿದ್ದು, ಬೇರೆ ಯಾವುದೇ ಗಂಭೀರ ಅಡ್ಡಪರಿಣಾಮಗಳು ಕಂಡು ಬಂದಿಲ್ಲ ಎಂದು ವರದಿಯಾಗಿದೆ.
"ಸರಿಯಾದ ಮೇಲ್ವಿಚಾರಣೆಯ ನಂತರ ಮಾತ್ರ ಆಕೆಗೆ ಹೋಗಲು ಅನುಮತಿ ನೀಡಲಾಯಿತು. ಅದೃಷ್ಟವಶಾತ್, ಆಕೆಯಲ್ಲಿ ಯಾವುದೇ ಗಂಭೀರ ರೋಗಲಕ್ಷಣಗಳು ಇಲ್ಲ" ಎಂದು ಡಾ. ಕುಮಾರ್ ಹೇಳಿದರು.
ಜಿಲ್ಲಾಧಿಕಾರಿ ಜಿತೇಂದ್ರ ಪ್ರತಾಪ್ ಸಿಂಗ್, "ಈ ಘಟನೆಯನ್ನು ನಾನು ಗಂಭೀರವಾಗಿ ಪರಿಗಣಿಸಿದ್ದು ಅಂತಹ ಘಟನೆಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ" ಎಂದು ಹೇಳಿದರು.