ಬೆಂಗಳೂರು, ಎ.04 (DaijiworldNews/MB) : ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಹಾಗೂ ಬಿಜೆಪಿ ನಾಯಕರ ವಿರುದ್ದ ನಿರಂತರ ವಾಗ್ದಾಳಿ ನಡೆಸುತ್ತಿರುವ ಬಿಜೆಪಿಯ ಹಿರಿಯ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ದ ಕಿಡಿಕಾರಿರುವ ಗಣಿಗಾರಿಕೆ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ಆರ್ ನಿರಾಣಿ ಅವರು, ''ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕರನ್ನು ನೀವು ಟೀಕಿಸಬೇಕಾದರೆ ಪಕ್ಷಕ್ಕೆ ರಾಜೀನಾಮೆ ನೀಡಿ ಪಕ್ಷ ತೊರೆದು ಹೋಗಿ'' ಎಂದು ಹೇಳಿದ್ದಾರೆ.
ಶನಿವಾರ ಬೆಳಗಾವಿ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ನಿರಾಣಿ ಅವರು, ''ಯತ್ನಾಳ್ ಅವರನ್ನು ಅತ್ಯಂತ ಅಸಮರ್ಥ ಮತ್ತು ನಿಷ್ಪ್ರಯೋಜಕ ರಾಜಕಾರಣಿ'' ಎಂದು ಟೀಕಿಸಿದರು. ಏಕವಚನದಲ್ಲಿ ಯತ್ನಾಳ್ ವಿರುದ್ದ ಕಿಡಿಕಾರಿದ ನಿರಾಣಿ ಅವರು, ''ಆತ ಪಕ್ಷದ ಟಿಕೆಟ್ ಮತ್ತು ಚಿಹ್ನೆಯಿಂದಾಗಿ ಗೆದ್ದಿದ್ದಾನೆ ಎಂದು ನೆನಪಿನಲ್ಲಿಟ್ಟುಕೊಳ್ಳಲಿ. ಪಕ್ಷದ ನಾಯಕತ್ವದ ಮೇಲೆ ಹಲ್ಲೆ ಮತ್ತು ಟೀಕಿಸುವ ಬದಲು, ಅವನು ಬಾಯಿ ಮುಚ್ಚಿಕೊಳ್ಳಬೇಕು'' ಎಂದಿದ್ದಾರೆ.
"ಅವರ ಹಿರಿತನದ ದೃಷ್ಟಿಯಿಂದ ಪಕ್ಷವು ಅವನನ್ನು (ಯತ್ನಾಳ್) ಸಹಿಸಿಕೊಂಡಿತ್ತು. ಆದರೆ ಇನ್ನೂ ಆತ ಮನ ಬಂದಂತೆ ವರ್ತಿಸಿದರೆ ಆತನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ನಾವು ಯಾವಾಗಲೂ ಸುಮ್ಮನಿರಲು ಸಾಧ್ಯವಿಲ್ಲ" ಎಂದು ಹೇಳಿದರು.
''ಯತ್ನಾಳ್ ಅವರ ಪಕ್ಷ ವಿರೋಧಿ ಚಟುವಟಿಕೆಗಳನ್ನು ಬಿಜೆಪಿ ಹೈಕಮಾಂಡ್ ಗಮನಿಸುತ್ತಿದೆ ಮತ್ತು ಸೂಕ್ತ ಸಮಯದಲ್ಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಿದೆ'' ಎಂದೂ ನಿರಾಣಿ ಹೇಳಿದರು.