ನವದೆಹಲಿ, ಎ.03 (DaijiworldNews/MB) : ''ಸಂಸದ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾರತದ ಆಂತರಿಕ ವಿಚಾರವನ್ನು ಯುಎಸ್ ಪ್ರತಿನಿಧಿಯೊಂದಿಗೆ ಪ್ರಸ್ತಾಪಿಸಿರುವುದು ಎಷ್ಟು ಸರಿ?'' ಎಂದು ಕರ್ನಾಟಕ ಬಿಜೆಪಿ ಪ್ರಶ್ನಿಸಿದೆ.
ಪ್ರಜಾಪ್ರಭುತ್ವ ಸಿದ್ಧಾಂತದ ಬಗ್ಗೆ ರಷ್ಯಾ ಮತ್ತು ಚೀನಾ ದೇಶ ಕಠಿಣ ನಿಲುವು ಹೊಂದಿರುವ ಬಗ್ಗೆ ನಡೆದ ವೆಬಿನಾರ್ನಲ್ಲಿ ರಾಹುಲ್ ಗಾಂಧಿ ಭಾಗಿಯಾಗಿದ್ದು, ಈ ಸಂದರ್ಭ ಅಮೇರಿಕಾದ ಮಾಜಿ ರಾಯಭಾರಿ, ಪ್ರಸ್ತುತ ಹಾರ್ವರ್ಡ್ ಕೆನಡಿ ಸ್ಕೂಲ್ನಲ್ಲಿ ಪ್ರಾಧ್ಯಾಪಕರಾಗಿರುವ ನಿಕೋಲಾಸ್ ಬರ್ನ್ಸ್ ಪ್ರಶ್ನೆಗೆ ಉತ್ತರಿಸಿದ್ದರು. ಒಂದುವೇಳೆ ನೀವು ಭಾರತದ ಪ್ರಧಾನಿಯಾದರೆ? ಎಂಬ ಅವರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ''ನಾನು ಭಾರತದ ಪ್ರಧಾನಿಯಾದ್ದಲ್ಲಿ ಅಭಿವೃದ್ಧಿ ಕೇಂದ್ರಿತ ಯೋಜನೆಗಳಿಗಿಂತ ಹೆಚ್ಚಾಗಿ ಉದ್ಯೋಗ ಕೇಂದ್ರಿತ ಯೋಜನೆಗಳಿಗೆ ಗಮನ ನೀಡುತ್ತೇನೆ ಎಂದಿದ್ದರು. ಹಾಗೆಯೇ ಭಾರತದಲ್ಲಿ 2014ರ ಬಳಿಕ ಆಡಳಿತಾರೂಢ ಬಿಜೆಪಿ ಸರ್ಕಾರವು ಸಾರ್ವಜನಿಕ ಸಂಸ್ಥೆಗಳನ್ನು ತನ್ನ ಹತೋಟಿಯಲ್ಲಿ ಇರಿಸಿದೆ. ದೇಶದಲ್ಲಿ ಈ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಸಮಾನ ಮನಸ್ಕರನ್ನು ಒಟ್ಟುಗೂಡಿಸುವುದು ಅತೀ ಮುಖ್ಯವಾಗಿದೆ ಎಂದೂ ಹೇಳಿದ್ದರು.
ಈ ವಿಚಾರವಾಗಿ ಕಾಂಗ್ರೆಸ್ ಹಾಗೂ ರಾಹುಲ್ ವಿರುದ್ದ ವಾಗ್ದಾಳಿ ನಡೆಸಿ ಟ್ವೀಟ್ ಮಾಡಿರುವ ಬಿಜೆಪಿಯು, ''ವಯನಾಡಿನ ಸಂಸದ ರಾಹುಲ್ ಗಾಂಧಿ ಭಾರತದ ಆಂತರಿಕ ವಿಚಾರವನ್ನು ಯುಎಸ್ ಪ್ರತಿನಿಧಿಯೊಂದಿಗೆ ಪ್ರಸ್ತಾಪಿಸಿರುವುದು ಎಷ್ಟು ಸರಿ? ಪ್ರಧಾನಿ ಮೋದಿ ಅವರನ್ನು ಸೋಲಿಸಲು ಮಣಿಶಂಕರ್ ಅಯ್ಯರ್ ಪಾಕಿಸ್ಥಾನದ ನೆರವು ಕೇಳಿದ್ದರು. ಚೀನಾ ಪಕ್ಷದೊಂದಿಗೆ ರಾಹುಲ್ ಗಾಂಧಿ ಒಪ್ಪಂದ ಮಾಡಿಕೊಂಡರು. ಭಾರತ ವಿರೋಧಿಗಳೊಂದಿಗೆ ಕಾಂಗ್ರೆಸ್ ನಿಯತ್ತು ತೋರುವುದೇಕೆ?'' ಎಂದು ಪ್ರಶ್ನಿಸಿದೆ.
''ಭಾರತದ ಆಂತರಿಕ ವಿಚಾರವನ್ನು ವಿದೇಶಗಳೊಂದಿಗೆ ಹಂಚಿಕೊಳ್ಳುವ ಮೂಲಕ ರಾಹುಲ್ ಗಾಂಧಿ ದೇಶದ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ. ಕರ್ನಾಟಕದ ಯುವ ಕಾಂಗ್ರೆಸ್ ವಿಭಾಗದ ಆಂತರಿಕ ಚುನಾವಣೆಯನ್ನೇ ಕಾಂಗ್ರೆಸ್ ಸರಿಯಾಗಿ ನಿಭಾಯಿಸಲಿಲ್ಲ. ಆಂತರಿಕ ಚುನಾವಣೆ ನಿರ್ವಹಿಸಲಾಗದವರು ದೇಶದ ಚುನಾವಣೆಯ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ'' ಎಂದು ಹೇಳಿದೆ.