ಕಲಬುರ್ಗಿ, ಎ.03 (DaijiworldNews/MB) : ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರು ವಿಷಕಾರಿ ಆಗಿದ್ದಾರೆ. ಆದ್ದರಿಂದಲ್ಲೇ ಕಲಬುರ್ಗಿ ಜನರು ಸೋಲಿಸಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ತಿರುಗೇಟು ನೀಡಿದ್ದಾರೆ.
ಬೀದರ್ ಜಿಲ್ಲೆಯ ಬಸವಕಲ್ಯಾಣ ಉಪ ಚುನಾವಣೆ ಪ್ರಚಾರಕ್ಕೆ ತೆರಳಲು ವಿಶೇಷ ವಿಮಾನದ ಮೂಲಕ ಇಲ್ಲಿಗೆ ಬಂದಿಳಿದ ಅವರು ಮಾಧ್ಯಮದೊಂದಿಗೆ ಮಾತನಾಡಿದ್ದು, ಈ ಸಂದರ್ಭ ಬಿಜೆಪಿ, ಆರ್ಎಸ್ಎಸ್ ವಿಷಕಾರಿ ಸಿದ್ಧಾಂತ ಹೊಂದಿವೆ ಎಂದು ಹೇಳಿದ್ದ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದರು. ಖರ್ಗೆ ಅವರು ಏನೆಂಬುದನ್ನು ಅವರೇ ಅರ್ಥ ಮಾಡಿಕೊಳ್ಳಬೇಕು. ಅವರು ಒಳ್ಳೆಯವರೇ ಆದರೆ ಅವರನ್ನು ಜನರು ಏಕೆ ಸೋಲಿಸುತ್ತಿದ್ದರು ಎಂದು ಅವರು ಅರ್ಥ ಮಾಡಿಕೊಳ್ಳಲಿ. ಅವರ ನಿಜ ಮುಖ ಅರ್ಥ ಮಾಡಿಕೊಂಡು ಜನರು ಅವರನ್ನು ಸೋಲಿಸಿದ್ದಾರೆ ಎಂದು ಹೇಳಿದರು.
ಇನ್ನು ಇದೇ ವೇಳೆ ಬಿಜೆಪಿ ದುಡ್ಡಿನ ಮೇಲೆ ಚುನಾವಣೆ ಮಾಡುತ್ತಿದೆ ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ನಳಿನ್ ಅವರು, 73 ವರ್ಷಗಳಿಂದ ಕಾಂಗ್ರೆಸ್ ಯಾವ ರೀತಿಯಾಗಿ ಚುನಾವಣೆ ಮಾಡಿದೆ? ಪ್ರಶ್ನಿಸಿದರು.
ನೀವು ಹಣ ಬಲದ ಮೇಲೆಯೇ ದೇಶದ ಅಧಿಕಾರ ನಡೆಸಿದವರು. ಈಗ ನಮ್ಮ ಮೇಲೆ ಆರೋಪ ಮಾಡುತ್ತೀರಿ ಎಂದು ಗರಂ ಆದರು.
ಇನ್ನು ಸಚಿವ ಈಶ್ವರಪ್ಪ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ವಿರುದ್ದ ಗರಂ ಆದ ಬಗ್ಗೆ ಮಾತನಾಡಿದ ಅವರು, ನಮ್ಮ ಪಕ್ಷದ ಒಳಗೆ ಕೆಲವು ಅಭಿಪ್ರಾಯಭೇದಗಳಿವೆ. ಆದರೆ ಭಿನ್ನಾಭಿಪ್ರಾಯವಿಲ್ಲ. ಈಶ್ವರಪ್ಪ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಧ್ಯೆ ಉಂಟಾದ ಸಣ್ಣ ವ್ಯತ್ಯಾಸ ಎರಡು ದಿನಗಳಲ್ಲಿ ಬಗೆಹರಿಯುತ್ತೆ ಎಂದರು.
ಇನ್ನು ಇಬ್ಬರ ನಡುವಿನ ವ್ಯತ್ಯಾಸವು ಈ ಉಪಚುನಾವಣೆಗೆ ಯಾವುದೇ ಪ್ರಭಾವ ಬೀರಲಾರದು ಎಂದು ಕೂಡಾ ಅಭಿಪ್ರಾಯಿಸಿದರು.
ಶಾಸಕ ರಮೇಶ್ ಜಾರಕಿಹೊಳಿ ಅವರದ್ದು ಎಂದು ಹೇಳಲಾದ ಸಿಡಿ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದ್ದು ನಮಗೆ ತನಿಖಾ ಸಂಸ್ಥೆ ಮೇಲೆ ಸಂಪೂರ್ಣ ನಂಬಿಕೆಯಿದೆ. ಸರ್ಕಾರ ಜಾರಕಿಹೊಳಿ ಅವರನ್ನು ರಕ್ಷಿಸುತ್ತಿದೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ಈ ಪ್ರಕರಣ ತನಿಖೆಯಲ್ಲಿ ಇರುವ ಕಾರಣ ಹೆಚ್ಚು ಪ್ರತಿಕ್ರಿಯೆ ನೀಡಲಾಗದು ಎಂದು ಹೇಳಿದರು.