ಕೋಲ್ಕತ್ತಾ, ಏ.03 (DaijiworldNews/HR): ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷವು ಸೋಲು ಕಾಣುವುದು ಖಚಿತ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ನಡ್ಡಾ ಹೇಳಿದ್ದು, ಇದಕ್ಕೆ ತಿರುಗೇಟು ನೀಡಿರುವ ಟಿಎಂಸಿ ನಾಯಕ ಡೇರೆಕ್ ಒಬ್ರಿಯಾನ್, "ನಿಮಗೆ ಸಾಧ್ಯವಾದರೆ ನಮ್ಮನ್ನು ಗೆಲುವಿನಿಂದ ತಡೆಯಿರಿ" ಎಂದು ಸವಾಲು ಹಾಕಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೋದಿ ಹಾಗೂ ಅಮಿತ್ ಶಾ ಅವರಿಗೆ ಒಂದು ಹಾಗೂ ಎರಡನೇ ಹಂತದ ಚುನಾವಣೆ ನಂತರ ರಾಜ್ಯದಲ್ಲಿ ಪಕ್ಷದ ಕಠಿಣ ಸ್ಥಿತಿ ಬಗ್ಗೆ ಅರಿವಾಗಿದ್ದು, ಅವರು ಹೊಸ ಮೈಂಡ್ ಗೇಮ್ ಆರಂಭಿಸಿದ್ದಾರೆ. ಅವರ ಮೈಂಡ್ಗೇಮ್ ಬಗ್ಗೆ ಆಶ್ಚರ್ಯವಾಗುತ್ತದೆ" ಎಂದು ಟೀಕಿಸಿದ್ದಾರೆ.
"ಟಿಎಂಸಿಯು 2019ರಲ್ಲಿ 3% ಹೆಚ್ಚಿನ ಮತವನ್ನು ಗಿಳಿಸಿತ್ತು, 2021ರಲ್ಲಿಯೂ ಇದೇ ಗೆಲುವಿನ ಹುಮ್ಮಸ್ಸಿನಲ್ಲಿ ಪಕ್ಷ ಮುಂದೆ ಸಾಗಿದ್ದು, ಸಾಧ್ಯವಾದರೆ ನಮ್ಮನ್ನು ತಡೆಯಿರಿ" ಎಂದು ಹೇಳಿದ್ದಾರೆ.
ಇನ್ನು ಮಮತಾ ಬ್ಯಾನರ್ಜಿ ನಂದಿಗ್ರಾಮ ಬಿಟ್ಟು ಮತ್ತೊಂದು ಕ್ಷೇತ್ರದತ್ತ ಹೋಗುತ್ತಾರೆ ಎಂಬ ಬಿಜೆಪಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, "ನಂದಿಗ್ರಾಮದಲ್ಲಿ ನಮ್ಮ ಗೆಲುವು ಖಚಿತವಾಗಿದ್ದು, ಬೇರೆ ಕ್ಷೇತ್ರದತ್ತ ಹೊರಳುವ ಮಾತೇ ಇಲ್ಲ" ಎಂದು ಹೇಳಿದ್ದಾರೆ.