ಹಾಸನ, ಎ.03 (DaijiworldNews/MB) : ''ನಾನು ಸಾಮಾನ್ಯವಾಗಿ ದೇವಸ್ಥಾನಗಳಿಗೆ ಹೋಗಲ್ಲ, ಯಾಕಂದ್ರೆ ದೇವರು ನನ್ನೊಳಗೆಯೇ ಇದ್ದಾನೆ. ನಾನು ಮಾಡುವ ಕಾರ್ಯವನ್ನು ಪ್ರಾಮಾಣಿಕವಾಗಿ ಮಾಡಿದರೆ ದೇವರು ಮೆಚ್ಚುವನು'' ಎಂದು ಸಿದ್ದರಾಮಯ್ಯನವರು ಹೇಳಿದ್ದಾರೆ.
ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹುಲ್ಲೇನಹಳ್ಳಿ ಗ್ರಾಮದ ಚೌಡೇಶ್ವರಿ ದೇವಾಲಯದಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭಾಗಿಯಾದರು.
ಈ ಸಂದರ್ಭ ತಮ್ಮ ಮಾತಿಗೂ ಮುನ್ನ ವೇದಿಕೆಯಲ್ಲಿ ನಿಂತಿದ್ದವರಿಗೆ ಏಯ್ ನಿಮಗೆ ಇಲ್ಲೇನ್ರೀ ಕೆಲಸ ಎಂದು ಗದರಿಸಿ ಕೆಳಗಿಳಿಸಿದ ಸಿದ್ದರಾಮಯ್ಯ ಮಾತು ಆರಂಭಿಸಿ, ''ಹಲವು ದೇವರಿರಲು ಸಾಧ್ಯವಿಲ್ಲ. ದೇವರು ಒಬ್ಬನೇ. ದೇಶದಲ್ಲಿ ಐದು ಲಕ್ಷ ಹಳ್ಳಿಗಳಿವೆ ಅಷ್ಟು ದೇವರಿರೋಕೆ ಸಾಧ್ಯವೇ'' ಎಂದು ಪ್ರಶ್ನಿಸಿದರು.
''ದೇವರು ಎಲ್ಲೆಲ್ಲೂ ಇದ್ದಾನೆ. ಎಲ್ಲರ ಒಳಗೂ ಇದ್ದಾನೆ. ಈ ಕಾರಣದಿಂದಾಗಿ ಬಸವಾದಿ ಶರಣರು, ಉಳ್ಳವರು ಶಿವಾಲಯವ ಮಾಡುವರು ನಾನೇನು ಮಾಡಲಿ ಬಡವನಯ್ಯಾ. ಎನ್ನ ಕಾಲೇ ಕಂಬ, ದೇಹವೇ ದೇಗುಲ, ಶಿರವೇ ಹೊನ್ನ ಕಳಶವಯ್ಯ ಎಂದಿದ್ದಾರೆ. ಆತ್ಮಶುದ್ದಿಯಿಂದ ದೇವರಿಗೆ ಪೂಜೆ ಮಾಡಿದರೆ ದೇವರು ಒಳ್ಳೆಯದು ಮಾಡುತ್ತಾನೆ. ನಾವು ದೇವರ ಕಣ್ಣು ತಪ್ಪಿಸಿ ಏನೂ ಮಾಡಲು ಆಗದು. ಧರ್ಮ ಎಂದರೆ ಬೇರೆಯವರಿಗೆ ಕೆಟ್ಟದ್ದನ್ನು ಮಾಡದೆ, ಒಳ್ಳೆಯದನ್ನು ಮಾಡುವುದು'' ಎಂದು ಹೇಳಿದರು.
ಈ ಸಂದರ್ಭದಲ್ಲೇ ರಾಜ್ಯದ ಬಿಜೆಪಿ ಸರ್ಕಾರದ ವಿರುದ್ದ ಕಿಡಿಕಾರಿದ ಸಿದ್ದರಾಮಯ್ಯನವರು, ''ಬಿಎಸ್ವೈ ಸರ್ಕಾರ ಯಾವ ಕೆಲಸವೂ ಮಾಡಿಲ್ಲ. ಯಡಿಯೂರಪ್ಪ ಅವರ ಮಗ ಸರ್ವಾಧಿಕಾರಿಯಂತೆ ವರ್ತನೆ ಮಾಡುತ್ತಾನೆ. ಪಾಪ ಸಚಿವ ಕೆ.ಎಸ್.ಈಶ್ವರಪ್ಪ ಹಿರಿಯ ನಾಯಕ ಆದರೂ ಅವರ ಇಲಾಖೆಯಿಂದ ಯಾವ ಕಾರ್ಯವೂ ನಡೆಯದಂತೆ ಬಿಎಸ್ವೈ ಮಾಡಿದ್ದಾರೆ. ಬಿಎಸ್ವೈ ಇನ್ನೆಷ್ಟು ದಿನ ಇರ್ತಾರೋ ಏನೋ'' ಎಂದು ವ್ಯಂಗ್ಯವಾಡಿದ್ದು ಮಾತ್ರವಲ್ಲದೇ, ''ನಾನು ಈಶ್ವರಪ್ಪನವರ ಸ್ಥಾನದಲ್ಲಿ ಇದ್ದಿದ್ದರೆ ಒಂದು ಸೆಕೆಂಡ್ ಕೂಡಾ ಸಚಿವನಾಗಿ ಇರುತ್ತಿರಲಿಲ್ಲ. ಮಾನ, ಮರ್ಯಾದೆ, ಸ್ವಾಭಿಮಾನ ಬಿಟ್ಟು ಯಾವುದೇ ಹುದ್ದೆಯಲ್ಲಿ ಇರಲಾಗದು'' ಎಂದು ಹೇಳಿದ್ದಾರೆ.
ಹಾಗೆಯೇ, ''ನಾನು ನನ್ನ ಜೀವನದಲ್ಲೇ ಯಾರಿಗೂ ಗೊಡ್ಡು ಸಲಾಮ್ ಹೊಡೆದಿಲ್ಲ. ಯಾರಿಗೂ ಜಗ್ಗುವುದು ಕೂಡಾ ಇಲ್ಲ'' ಎಂದಿದ್ದಾರೆ.