ಚಂಡೀಗಢ, ಎ.03 (DaijiworldNews/MB) : ವಿವಾಹವಾಗುವುದಾಗಿ ಭರವಸೆ ನೀಡಿ 15 ವರ್ಷದ ಬಾಲಕಿಯನ್ನು ವಲಸೆ ಕಾರ್ಮಿಕನೊಬ್ಬ ಅತ್ಯಾಚಾರ ಎಸಗಿರುವ ಘಟನೆ ಪಂಜಾಬ್ನ ಹೋಶಿಯಾರ್ಪುರ ಜಿಲ್ಲೆಯಲ್ಲಿ ನಡೆದಿದ್ದು, ಮಾರ್ಚ್ 22 ರಂದು ಆ ಬಾಲಕಿ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ. ಆ ಬಳಿಕ ಪೊಲೀಸರು ಈಗ ಆರೋಪಿಯ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ವರದಿಗಳ ಪ್ರಕಾರ, ಉತ್ತರಪ್ರದೇಶದ ಮೂಲದ ಆರೋಪಿ ಬಾಲಕಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿ ದೈಹಿಕ ಸಂಬಂಧವನ್ನು ಬೆಳೆಸಿಕೊಂಡಿದ್ದ. ಇದರಿಂದಾಗಿ ಬಾಲಕಿ ಗರ್ಭಿಣಿಯಾಗಿದ್ದಾಳೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಯೋರ್ವರು, ಬಾಲಕಿಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ ಆರೋಪಿಯು ಆಕೆ ಗರ್ಭಿಣಿಯಾದ ಬಳಿಕ ಮದುವೆಯಾಗಲು ಹಿಂಜರೆದಿದ್ದಾನೆ. ಮಾರ್ಚ್ 22 ರಂದು ಬದುಕುಳಿದವರು ಗಂಡು ಮಗು ಜನಿಸಿದೆ. ಆ ಬಳಿಕವೂ ಆತ ಮದುವೆಯಾಗಲು ನಿರಾಕರಿಸಿದ್ದು ಈ ಹಿನ್ನೆಲೆ ಸಂತ್ರಸ್ತೆಯ ತಂದೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಂತ್ರಸ್ತೆಯ ತಂದೆ ನೀಡಿದ ದೂರಿನ ಆಧಾರದ ಮೇಲೆ, ವಲಸೆ ಕಾರ್ಮಿಕನ ವಿರುದ್ಧ ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯಡಿ ಸಂಬಂಧಿತ ಆರೋಪಗಳನ್ನು ಸಹ ಆರೋಪಿ ವಿರುದ್ಧ ದಾಖಲಿಸಲಾಗಿದೆ.