ಬೆಂಗಳೂರು, ಎ.03 (DaijiworldNews/PY): ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಟ್ವೀಟ್ ವಾರ್ ಶನಿವಾರವೂ ಮುಂದುವರೆದಿದ್ದು," ಮುಖ್ಯಮಂತ್ರಿಗೆ ಮತಿ ಇಲ್ಲ. ಬಿಜೆಪಿಗೆ ಲಜ್ಜೆ ಇಲ್ಲ. ಸ್ವತಃ ಬಿಜೆಪಿಗರೇ ಬಾಯ್ಬಿಟ್ಟ ಸತ್ಯಗಳಿವು" ಎಂದು ಬಿಜೆಪಿ ವಿರುದ್ದ ಕಾಂಗ್ರೆಸ್ ಕೆಂಡಕಾರಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಸಚಿವರಿಗೆ ಸ್ವತಂತ್ರವಿಲ್ಲ. ಶಾಸಕರಿಗೆ ಅನುದಾನವಿಲ್ಲ. ಖಜಾನೆಯಲ್ಲಿ ಹಣವಿಲ್ಲ. ಜನಹಿತದ ಯೋಜನೆ ಇಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಇಲ್ಲ. ಬಜೆಟ್ನಲ್ಲಿ ಹುರುಳಿಲ್ಲ. ಜನರ ಸಂಕಷ್ಟಕ್ಕೆ ಕೊನೆಯಿಲ್ಲ. ಭ್ರಷ್ಟಾಚಾರಕ್ಕೆ ಮಿತಿ ಇಲ್ಲ. ಮುಖ್ಯಮಂತ್ರಿಗೆ ಮತಿ ಇಲ್ಲ. ಬಿಜೆಪಿಗೆ ಲಜ್ಜೆ ಇಲ್ಲ. ಸ್ವತಃ ಬಿಜೆಪಿಗರೇ ಬಾಯ್ಬಿಟ್ಟ ಸತ್ಯಗಳಿವು" ಎಂದು ವಾಗ್ದಾಳಿ ನಡೆಸಿದೆ.
"ಯಡಿಯೂರಪ್ಪ ಅವರು ಲಿಂಗಾಯತ ನಾಯಕರನ್ನು ಮುಗಿಸಿದರು, ಈಗ ಹಿಂದುಳಿದ ವರ್ಗದ ನಾಯಕರನ್ನು ಮುಗಿಸುವ ಕಾರ್ಯಕ್ರಮ ಹಾಕಿದ್ದಾರೆ ಎಂಬುದಾಗಿ ಶಾಸಕ ಬಸನಗೌಡ ಪಾಟೀಲ್ ಹೇಳಿದ್ದಾರೆ. ಯಡಿಯೂರಪ್ಪ ಅವರೇ, ಯತ್ನಾಳ್ ಹೇಳಿದಂತೆ ಬಿ.ಬಿ ಶಿವಪ್ಪನವರಿಂದ ಹಿಡಿದು ಇಂದಿನ ನಾಯಕರವರೆಗೂ ಎಲ್ಲರನ್ನೂ ಮುಗಿಸಿದಿರಿ ಅಲ್ಲವೇ? ನೀವು ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳದಿರುವುದು, ಅವರ ಆರೋಪ ಒಪ್ಪಿದಂತೆ!" ಎಂದು ಹೇಳಿದೆ.