ತಿರುವನಂತಪುರ, ಎ.03 (DaijiworldNews/PY): ಕೇರಳದ ವಿಧಾನಸಭಾ ಚುನಾವಣೆಗೆ ಮೊದಲ ಬಾರಿಗೆ ಸ್ಪರ್ಧಿಸಿದ್ದ ತೃತೀಯ ಲಿಂಗಿ ಅನನ್ಯಾ ಕುಮಾರಿ ಅಲೆಕ್ಸಾ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.
ಅನನ್ಯಾ ಅವರಿಗೆ ಮಾನಸಿಕ ಹಿಂಸೆ ಹಾಗೂ ಪ್ರಾಣ ಬೆದರಿಕೆ ಇರುವುದಾಗಿ ಕಾರಣ ನೀಡಿ ಕೊನೆ ಕ್ಷಣದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.
ಕೇರಳದ ವೆಂಗರ ಕ್ಷೇತ್ರದಿಂದ ಡೆಮಾಕ್ರಟಿಕ್ ಸೋಷಿಯಲ್ ಜಸ್ಟೀಸ್ ಪಕ್ಷದ ಅಭ್ಯರ್ಥಿಯಾಗಿ ಅನನ್ಯಾ ಅವರು ನಾಮಪತ್ರ ಸಲ್ಲಿಸಿದ್ದರು. ಇದೀಗ ನಾಮಪತ್ರ ಪಡೆಯುವ ಮೂಲಕ ಚುನಾವಣೆಯಿಂದ ಹೊರಬಂದಿದ್ದಾರೆ.
ಈ ಬಗ್ಗೆ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, "ಡೆಮಾಕ್ರಟಿಕ್ ಫ್ರಂಟ್ ಪಕ್ಷದ ಹಿರಿಯ ಅಭ್ಯರ್ಥಿ ಪಿ.ಕೆ ಕುನ್ಹಾಲಿಕುಟ್ಟಿ ಅವರ ವಿರುದ್ಧ ಚುನಾವಣೆಯ ಪ್ರಚಾರ ಸಂದರ್ಭ ಆರೋಪ ಮಾಡಬೇಕಾಗಿ ತಿಳಿಸಿದ್ದರು. ಇದಕ್ಕೆ ಒಪ್ಪದ ಕಾರಣ ನಮ್ಮ ಪಕ್ಷದಿಂದಲೇ ನನಗೆ ಮಾನಸಿಕ ಒತ್ತಡ ಬಂದಿದೆ. ಈ ಕಾರಣದಿಂದ ನಾನು ಈ ತೀರ್ಮಾನ ತೆಗೆದುಕೊಂಡಿದ್ದೇನೆ" ಎಂದಿದ್ದಾರೆ.
"ನನಗೆ ವೆಂಗರ ಕ್ಷೇತ್ರದಿಂದ ಡೆಮಾಕ್ರಟಿಕ್ ಸೋಷಿಯಲ್ ಜಸ್ಟೀಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವಂತೆ ಪಕ್ಷದಿಂದ ಕರೆ ಬಂದಿತ್ತು. ನಾನು ಇದನ್ನು ಮೊದಲು ಒಪ್ಪಿಕೊಂಡೆ. ಬಳಿಕ ನನಗೆ ಕೆಲವು ವಿಚಾರಗಳು ತಿಳಿಯಿತು. ಆ ಕಾರಣದಿಂದ ನಾನು ಸಮಸ್ಯೆಗೆ ಒಳಗಾಗಲು ಇಚ್ಛಿಸುವುದಿಲ್ಲ" ಎಂದು ಹೇಳಿದ್ದಾರೆ.
ಕೇರಳದ ಕೊಲ್ಲಂ ಜಿಲ್ಲೆಯ ಪೆರುಮಾನ್ನ ಮೂಲದವರಾದ ಅನನ್ಯಾ ಕುಮಾರಿ ಅಲೆಕ್ಸಾ ಅವರು, ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದರು. ಅಲ್ಲದೇ ಇವರು ಮೇಕಪ್ ಕಲಾವಿದೆಯಾಗಿ ಹಾಗೂ ಖಾಸಗಿ ನ್ಯೂಸ್ ಚಾನಲ್ಗಳಲ್ಲಿ ಆ್ಯಂಕರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.