ಗುವಾಹಟಿ, ಎ.03 (DaijiworldNews/MB) : ಅಸ್ಸಾಂ ರಾಜ್ಯದ ಮೂರನೇ ಹಾಗೂ ಅಂತಿಮ ಹಂತದ ವಿಧಾನಸಭಾ ಚುನಾವಣೆಗೂ ಮುನ್ನ ತಮುಲ್ಪುರದಲ್ಲಿ ರ್ಯಾಲಿಯನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ತನ್ನ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ, ನಿರ್ಜಲೀಕರಣ (ನೀರಿನ ಕೊರತೆ) ದಿಂದ ಬಳಲುತ್ತಿದ್ದ ಬಿಜೆಪಿ ಕಾರ್ಯಕರ್ತನ ಆರೋಗ್ಯ ತಪಾಸಣೆ ಮಾಡಲು ತನ್ನ ವೈದ್ಯಕೀಯ ತಂಡಕ್ಕೆ ಸೂಚಿಸಿದ್ದಾರೆ.
ತಾನು ಭಾಷಣ ಮಾಡುತ್ತಿರುವ ನಡುವೆಯೇ ನಿರ್ಜಲೀಕರಣದಿಂದ ಬಿಜೆಪಿ ಕಾರ್ಯಕರ್ತನೋರ್ವ ಬಸವಳಿದಿರುವುದನ್ನು ಕಂಡ ಪ್ರಧಾನಿ ನರೇಂದ್ರ ಮೋದಿ ಅವರು, ತನ್ನ ಭಾಷಣವನ್ನು ನಿಲ್ಲಿಸಿ ತನ್ನ ವೈದ್ಯಕೀಯ ತಂಡಕ್ಕೆ ಸೂಚಿಸಿದ್ದಾರೆ.
ಪಿಎಂಒ ವೈದ್ಯಕೀಯ ತಂಡ ನೀರಿನ ಅಭಾವದಿಂದ ತೊಂದರೆಗೆ ಒಳಗಾಗಿರುವ ಕಾರ್ಯಕರ್ತನಿಗೆ ದಯವಿಟ್ಟು ಸಹಾಯ ಮಾಡಿ. ನನ್ನೊಂದಿಗೆ ಬಂದಿರುವ ವೈದ್ಯರು ನಮ್ಮ ಕಾರ್ಯಕರ್ತನಿಗೆ ಸಹಾಯ ಮಾಡಿ. ಅವರು ನೀರಿನ ಅಭಾವದಿಂದ ಬಸವಳಿದಿರಬಹುದು ಎಂದು ಹೇಳಿದ್ದಾರೆ.
ಪ್ರಧಾನಿ ತನ್ನ ಭಾಷಣವನ್ನು ನಿಲ್ಲಿಸಿ ಕಾರ್ಯಕರ್ತನ ಸಹಾಯಕ್ಕೆ ಧಾವಿಸುವಂತೆ ತನ್ನ ವೈದ್ಯರ ತಂಡಕ್ಕೆ ಸೂಚಿಸುತ್ತಿದ್ದಂತೆ ಸಭಿಕರೆಲ್ಲರೂ ಆ ಕಾರ್ಯಕರ್ತರೆಡೆಗೆ ತಿರುಗಿ ನೋಡಲು ಆರಂಭಿಸಿದರು. ಈ ಮೂಲಕ ಪ್ರಧಾನಿ ಮೋದಿ ಎಲ್ಲರ ಗಮನವನ್ನು ಕಾರ್ಯಕರ್ತನೆಡೆ ಸೆಳೆದರು.
ಶಿಷ್ಟಾಚಾರದಂತೆ ನಾಲ್ವರು ಸದಸ್ಯರನ್ನು ಒಳಗೊಂಡ ವೈದ್ಯಕೀಯ ತಜ್ಞರು ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಪ್ರಯಾಣ ಮಾಡುತ್ತಾರೆ.