ಗುವಾಹಟಿ, ಏ.03 (DaijiworldNews/HR): "ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ನಂದಿಗ್ರಾಮದಲ್ಲಿ ಸೋಲುತ್ತಾರೆ, ಹಾಗಾಗಿ ಬೇರೆ ಕಡೆ ಸ್ಪರ್ಧಿಸಲು ಮತ್ತೊಂದು ಕ್ಷೇತ್ರವನ್ನು ಹುಡುಕುತ್ತಿದ್ದಾರೆ ಎಂದು ಅವರ ಆಪ್ತರೇ ತಿಳಿಸಿದ್ದಾರೆ" ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಮಮತಾ ಮತ್ತೊಂದು ಕ್ಷೇತ್ರವನ್ನು ಹುಡುಕುತ್ತಿದ್ದಾರೆ ಎಂದು ಅವರ ಆಪ್ತರೇ ತಿಳಿಸಿದ್ದು, ಇದು ನಿಜವೇ ಎಂಬುದನ್ನು ನಾನು ಖಾತ್ರಿಪಡಿಸಿಕೊಳ್ಳಲು ಸಾಧ್ಯವಿಲ್ಲ. ಆದರೆ, ಆವರು ನಂದಿಗ್ರಾಮದಲ್ಲಿ ಸೋಲನ್ನು ಅನುಭವಿಸುತ್ತಾರೆ. ಇದು ನಿಶ್ಚಿತ" ಎಂದರು.
ಇನ್ನು "ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಸರ್ಕಾರವನ್ನು ಉಚ್ಚಾಟಿಸಲು ರಾಜ್ಯದ ಜನರು ಉತ್ಸುಕರಾಗಿದ್ದು, ನಾವು ಪಶ್ಚಿಮ ಬಂಗಾಳದಲ್ಲಿ ಸರ್ಕಾರವನ್ನು ರಚಿಸುತ್ತಿದ್ದೇವೆ. ಪಶ್ಚಿಮ ಬಂಗಾಳದ ಮತದಾನದ ಫಲಿತಾಂಶಗಳು ಆಘಾತಕಾರಿಯಾಗಿರುತ್ತವೆ" ಎಂದು ಹೇಳಿದ್ದಾರೆ.