ನವದೆಹಲಿ, ಎ.03 (DaijiworldNews/MB) : ಕಾಂಗ್ರೆಸ್ ಯುವನಾಯಕ, ಸಂಸದ ರಾಹುಲ್ ಗಾಂಧಿ ಅವರಿಗೆ ವೆಬಿನಾರ್ ಒಂದರಲ್ಲಿ ಅಮೇರಿಕಾದ ಮಾಜಿ ರಾಯಭಾರಿ, ಪ್ರಸ್ತುತ ಹಾರ್ವರ್ಡ್ ಕೆನಡಿ ಸ್ಕೂಲ್ನಲ್ಲಿ ಪ್ರಾಧ್ಯಾಪಕರಾಗಿರುವ ನಿಕೋಲಾಸ್ ಬರ್ನ್ಸ್ ಅವರು ಒಂದುವೇಳೆ ನೀವು ಭಾರತದ ಪ್ರಧಾನಿಯಾದರೆ? ಎಂದು ಪ್ರಶ್ನಿಸಿದ್ದು ಇದಕ್ಕೆ ರಾಹುಲ್ ಗಾಂಧಿ ಅವರು ಪ್ರತಿಕ್ರಿಯಿಸಿ, ''ನಾನು ಭಾರತದ ಪ್ರಧಾನಿಯಾದರೆ ಮೊದಲು ಉದ್ಯೋಗ ಸೃಷ್ಟಿಯತ್ತ ಗಮನಹರಿಸುವೆ'' ಎಂದು ಹೇಳಿದ್ದಾರೆ.
ಪ್ರಜಾಪ್ರಭುತ್ವ ಸಿದ್ಧಾಂತದ ಬಗ್ಗೆ ರಷ್ಯಾ ಮತ್ತು ಚೀನಾ ದೇಶ ಕಠಿಣ ನಿಲುವು ಹೊಂದಿರುವ ಬಗ್ಗೆ ನಡೆದ ವೆಬಿನಾರ್ನಲ್ಲಿ ರಾಹುಲ್ ಗಾಂಧಿ ಭಾಗಿಯಾಗಿದ್ದು, ಈ ಸಂದರ್ಭ ನಿಕೋಲಾಸ್ ಬರ್ನ್ಸ್ ಅವರ ಪ್ರಶ್ನೆಗೆ ಉತ್ತರಿಸಿದರು.
''ನಾನು ಭಾರತದ ಪ್ರಧಾನಿಯಾದ್ದಲ್ಲಿ ಅಭಿವೃದ್ಧಿ ಕೇಂದ್ರಿತ ಯೋಜನೆಗಳಿಗಿಂತ ಹೆಚ್ಚಾಗಿ ಉದ್ಯೋಗ ಕೇಂದ್ರಿತ ಯೋಜನೆಗಳಿಗೆ ಗಮನ ನೀಡುತ್ತೇನೆ. ನಾವು ಅಭಿವೃದ್ದಿ ಹೊಂದಬೇಕೆಂಬುದು ಸರಿ. ಆದರೆ ಎಲ್ಲ ವಲಯದಲ್ಲಿಯೂ ಉದ್ಯೋಗ ಸೃಷ್ಟಿ ಅತ್ಯಗತ್ಯ. ಈ ನಿಟ್ಟಿನಲ್ಲಿ ನಾನು ಉದ್ಯೋಗ ಸೃಷ್ಟಿಯೆಡೆ ಅಧಿಕ ಒಲವು ತೋರುವೆ'' ಎಂದು ತಿಳಿಸಿದ್ದಾರೆ.
ಇನ್ನು ವೆಬಿನಾರ್ನಲ್ಲಿ, ''ಭಾರತದಲ್ಲಿ ಪ್ರಜಾಪ್ರಭುತ್ವದ ಭವಿಷ್ಯದ ವಿಚಾರದಲ್ಲಿ ಅಮೇರಿಕಾ ಮೌನವಹಿಸಿದೆ. ಸ್ವಾತಂತ್ರ್ಯದ ಗಾಢ ಪರಿಕಲ್ಪನೆಯನ್ನು ಸಾರುವ ಸಂವಿಧಾನವನ್ನು ಅಮೇರಿಕಾವು ಹೊಂದಿದ್ದರೂ ಸಂವಿಧಾನದಲ್ಲಿ ಹೇಳಲಾದ ಕಲ್ಪನೆಗಳನ್ನು ಸಮರ್ಥಿಸಲು ಅಮೇರಿಕಾಕ್ಕೆ ಒಂದು ಪ್ರಶ್ನೆಯಾಗಿಯೇ ಉಳಿದಿದೆ'' ಎಂದು ಅಭಿಪ್ರಾಯಿಸಿದರು.
''ಭಾರತದಲ್ಲಿ 2014ರ ಬಳಿಕ ಆಡಳಿತಾರೂಢ ಬಿಜೆಪಿ ಸರ್ಕಾರವು ಸಾರ್ವಜನಿಕ ಸಂಸ್ಥೆಗಳನ್ನು ತನ್ನ ಹತೋಟಿಯಲ್ಲಿ ಇರಿಸಿದೆ. ದೇಶದಲ್ಲಿ ಈ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಸಂದರ್ಭದಲ್ಲಿ ಸಮಾನ ಮನಸ್ಕರನ್ನು ಒಟ್ಟುಗೂಡಿಸುವುದು ಅತೀ ಮುಖ್ಯವಾಗಿದೆ'' ಎಂದು ಹೇಳಿದರು.