ಮೀರತ್, ಎ.03 (DaijiworldNews/PY): ಟ್ಯೂಷನ್ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದ 10ನೇ ತರಗತಿ ವಿದ್ಯಾರ್ಥಿನಿಯನ್ನು ಗ್ಯಾಂಗ್ರೇಪ್ ಮಾಡಿ ವಿಷ ಕುಡಿಸಿ ಹತ್ಯೆಗೈದ ಘಟನೆ ಉತ್ತರಪ್ರದೇಶದ ಮೀರತ್ನಲ್ಲಿ ನಡೆದಿದೆ.
ಸಾಂದರ್ಭಿಕ ಚಿತ್ರ
ವಿದ್ಯಾರ್ಥಿನಿ ಟ್ಯೂಷನ್ ಮುಗಿಸಿ ಮನೆಗೆ ವಾಪಾಸ್ಸಾಗುತ್ತಿದ್ದ ಸಂದರ್ಭ ಸರ್ದಾನ ಕೋಟ್ವಾಲಿ ಪ್ರದೇಶದ ಸಮೀಪ ದುಷ್ಕರ್ಮಿಗಳು ಆಕೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದು, ಬಳಿಕ ಆಕೆಗೆ ವಿಷ ನೀಡಿದ್ದಾರೆ. ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಬಾಲಕಿ ಅದೇ ಸ್ಥಿತಿಯಲ್ಲಿ ಮನೆಗೆ ಮರಳಿದ್ದಾಳೆ.
ಮನೆಗೆ ವಾಪಾಸ್ಸಾದ ಬಾಲಕಿ ಕೂಡಲೇ ಈ ವಿಚಾರವನ್ನು ಮನೆಯಲ್ಲಿ ತಿಳಿಸಿದ್ದಾಳೆ. ಬಳಿಕ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಆಕೆ ಸಾವನ್ನಪ್ಪಿದ್ದಾಳೆ.
"ನಾಲ್ವರು ಯುವಕರು ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಬಾಲಕಿ ತಿಳಿಸಿದ್ದಾಳೆ. ಪಕ್ಕದ ಹಳ್ಳಿಯ ನಿವಾಸಿಗಳಾದ ಸಂಜಯ್ ಎಂಬವರ ಪುತ್ರ ಲಖನ್ ಹಾಗೂ ಬಲವಂತ್ ಅಲಿಯಾಸ್ ಮುರಳಿ ಎಂಬವರ ಮಗ ವಿಕಾಸ್ ಹಾಗೂ ಇನ್ನಿಬ್ಬರ ಹೆಸರನ್ನು ಬಾಲಕಿ ಹೇಳಿದ್ದಾಳೆ. ಲಖನ್ ಹಾಗೂ ವಿಕಾಸ್ನ ಬಂಧನವಾಗಿದೆ. ಉಳಿದ ಇಬ್ಬರನ್ನು ಶೀಘ್ರವೇ ಬಂಧಿಸಲಾಗುವುದು" ಎಂದು ಪೊಲೀಸರು ತಿಳಿಸಿದ್ದಾರೆ.
"ಮೃತ ಬಾಲಕಿಯ ಮನೆಯ ಸಮೀಪ ಇರುವ ಟವರ್ ಬಳಿ ಕಾಪಸಾಡ್ ಗ್ರಾಮದ ನಾಲ್ವರು ಯುವಕರು ಆಕೆಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ" ಎಂದು ಪೊಲೀಸರು ತಿಳಿಸಿದ್ದಾರೆ.