ನವದೆಹಲಿ, ಎ.03 (DaijiworldNews/MB) : ಅಸ್ಸಾಂನಲ್ಲಿ ಗುರುವಾರ ಎರಡನೇ ಹಂತದ ಮತದಾನ ಮುಕ್ತಾಯವಾಗಿ ಕೆಲವೇ ಗಂಟೆಗಳಲ್ಲಿ ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ವಿದ್ಯುನ್ಮಾನ ಮತ ಯಂತ್ರ(ಇವಿಎಂ)ಗಳು ಪತ್ತೆಯಾಗಿದೆ. ಈ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ವಿರುದ್ದ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ''ಪ್ರತಿ ಬಾರಿ ಚುನಾವಣಾ ವಾಹನ ಕೆಟ್ಟು ನಿಂತಾಗಲೂ ಬಿಜೆಪಿ ವಾಹನವೇ ಸಹಾಯಕ್ಕೆ ಬರುತ್ತದೆ'' ಎಂದು ಬಿಜೆಪಿಯ ಕಾಲೆಳೆದಿದೆ.
ಅಸ್ಸಾಂನ ರತವಾಡಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಯೊಂದರ ಚುನಾವಣಾಧಿಕಾರಿಯು ಮತದಾನದ ಬಳಿಕ ಮತಯಂತ್ರವನ್ನು ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಸಾಗಿಸಿದ್ದು ಈ ಹಿನ್ನೆಲೆ ಈ ಮತಗಟ್ಟೆಯಲ್ಲಿ ಮರು ಚುನಾವಣೆಗೆ ಆದೇಶಿಸಲಾಗಿದೆ. ಹಾಗೆಯೇ ಚುನಾವಣಾಧಿಕಾರಿ ಹಾಗೂ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಭಾರೀ ಮಳೆ ಸುರಿಯುತ್ತಿತ್ತು. ಈನ ಸಂದರ್ಭದಲ್ಲಿ ಮತಯಂತ್ರವಿದ್ದ ವಾಹನದಲ್ಲಿ ತೊಂದರೆ ಕಾಣಿಸಿಕೊಂಡಿತು. ಸಂಚಾರ ದಟ್ಟಣೆ ಹಾಗೂ ಮಳೆಯ ಕಾಣದಿಂದ ಬೆಂಗಾವಲು ವಾಹನ ಪ್ರತ್ಯೇಕವಾದವು. ಚುನಾವಣಾ ಅಧಿಕಾರಿ ವಲಯ ಅಧಿಕಾರಿಗೆ ಕರೆ ಮಾಡಿ ಬೇರೆ ವಾಹನ ಕಳುಹಿಸಲು ಹೇಳಿದ್ದಾರೆ. ಆದರೆ ಸಮಯಕ್ಕೆ ಸರಿಯಾಗಿ ಮತಯಂತ್ರ ತಲುಪಬೇಕಾದ ಕಾರಣಕ್ಕೆ ಅಧಿಕಾರಿಗಳು ದಾರಿಯಲ್ಲಿ ಸಿಕ್ಕ ವಾಹನವೊಂದನ್ನು ಏರಿಕೊಂಡು ಹೋಗಿದ್ದಾರೆ. ಅದು ಯಾರ ಕಾರು ಎಂದು ತಿಳಿದಿರಲಿಲ್ಲ ಎಂದು ಆಯೋಗವು ಹೇಳಿದೆ.
ಈ ವಿಚಾರದಲ್ಲಿ ಚುನಾವಣಾ ಆಯೋಗ ಹಾಗೂ ಬಿಜೆಪಿಯ ವಿರುದ್ದ ಕಿಡಿಕಾರಿರುವ ಕರ್ನಾಟಕ ಕಾಂಗ್ರೆಸ್, ''ಪ್ರತಿ ಇವಿಎಂ ಕೆಟ್ಟಾಗಲೂ ಅದು ಬಿಜೆಪಿ ಬಟನ್ ಪರವಾಗಿಯೇ ಕೆಲಸ ಮಾಡುತ್ತಿರುತ್ತದೆ. ಪ್ರತಿ ಬಾರಿ ಇವಿಎಂ ಸಾಗಿಸುವಾಗ ಸಿಕ್ಕಿಬೀಳುವ ವಾಹನ ಬಿಜೆಪಿಯದ್ದೇ ಆಗಿರುತ್ತದೆ. ಪ್ರತಿ ಬಾರಿ ಚುನಾವಣಾ ವಾಹನ ಕೆಟ್ಟು ನಿಂತಾಗಲೂ ಬಿಜೆಪಿ ವಾಹನವೇ ಸಹಾಯಕ್ಕೆ ಬರುತ್ತದೆ. 'ಕಾಕತಾಳೀಯ' ಎಂಬ ಪದವೂ ಕೂಡ ಒಂದು ಪಕ್ಷದ ಪರವಾಗಿರುವುದು ಕಾಕತಾಳಿಯವೇ'' ಎಂದು ವ್ಯಂಗ್ಯವಾಡಿದೆ.