ಬೆಂಗಳೂರು, ಏ.03 (DaijiworldNews/HR): "ರಾಜ್ಯ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆಯಿಲ್ಲ, ಕೆಲವರು ಬದಲಾಯಿಸುವಂತೆ ಮನವಿ ಮಾಡುತ್ತಿದ್ದಾರೆ ಆದರೆ ಕೊರೊನಾ ಸೋಂಕು ನಿಯಂತ್ರಣವಾಗದ ಕಾರಣ ಮಾರ್ಗಸೂಚಿಯಲ್ಲಿ ಬದಲಾವಣೆ ಇಲ್ಲ" ಎಂದು ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯ ಸರ್ಕಾರವು ಏಕಾಏಕಿ ಮಾರ್ಗಸೂಚಿ ತಂದಿಲ್ಲ. ತಾಂತ್ರಿಕ ಸಲಹಾ ಸಮಿತಿ ವರದಿ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳಲಾಗಿದ್ದು, ಇದು ಏ.20ರವರೆಗೂ ಈಗಿನ ಮಾರ್ಗಸೂಚಿ ಅನ್ವಯವಾಗಲಿದೆ" ಎಂದರು.
"ನಾವು ಈಗ ಎರಡನೇ ಅಲೆ ಹೊಸ್ತಿಲಲ್ಲಿದ್ದು, ಕೊರೊನಾ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಾದುದು ಅನಿವಾರ್ಯ. ನಮಗೆ ಬೇರೆ ದಾರಿಯೇ ಇಲ್ಲ. 45 ವರ್ಷ ಮೇಲ್ಪಟ್ಟವರೆಲ್ಲರು ದಯವಿಟ್ಟು ಲಸಿಕೆ ಪಡೆಯಬೇಕು, ಗುಂಪು ಸೇರುವುದನ್ನು ಕಡಿಮೆ ಮಾಡಿ ಮಾಸ್ಕ್ ಬಳಸಬೇಕು" ಎಂದರು.
ಇನ್ನು "ಶಾಲೆ, ಜಿಮ್, ಸ್ವಿಮ್ಮಿಂಗ್ ಪೂಲ್, ಮದುವೆ, ಅಪಾರ್ಟ್ಮೆಂಟ್ ಎಲ್ಲವೂ ತೆಗೆದರೆ ಕೊರೊನಾದಿಂದ ದೂರ ಇರುವುದಕ್ಕೆ ಸಾಧ್ಯವಿಲ್ಲ, ಹಾಗಾಗಿ ಈಗ ಕ್ರಮ ಕೈಗೊಳ್ಳಬೇಕಾಗಿರುವುದು ಅನಿವಾರ್ಯ" ಎಂದು ಹೇಳಿದರು.