ನವದೆಹಲಿ, ಏ.03 (DaijiworldNews/HR): ಉತ್ತರ ಪ್ರದೇಶ ಹಾಗೂ ಬಿಹಾರಗಳಿಂದ ಬಂದ ವಲಸೆ ಕಾರ್ಮಿಕರಿಗೆ ಮಾದಕ ವಸ್ತುಗಳನ್ನು ನೀಡಿ ಅವರನ್ನು ಹೆಚ್ಚಿನ ಅವಧಿಗೆ ದುಡಿಸಿಕೊಳ್ಳಲಾಗುತ್ತಿದ್ದು, ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಪಂಜಾಬ್ ಸರ್ಕಾರಕ್ಕೆ ಕೇಂದ್ರ ಸರ್ಕಾರ ಪತ್ರೆ ಬರೆದಿದೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಪಂಜಾಬ್ನ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಪತ್ರ ಬರೆದಿದ್ದ ಗೃಹ ಸಚಿವಾಲಯ, 2019-20ರಲ್ಲಿ ಪಂಜಾಬ್ನ ಗಡಿ ಜಿಲ್ಲೆಗಳಿಂದ ಅಂತಹ 58 ಕಾರ್ಮಿಕರನ್ನು ಬಿಎಸ್ಎಫ್ ಪಡೆ ಬಂಧಿಸಿದ್ದು, ಬಿಎಸ್ಎಫ್ ನಡೆಸಿದ ತನಿಖೆ ಆಧಾರದಲ್ಲಿ ಕ್ರಮ ತೆಗೆದುಕೊಳ್ಳುವಂತೆ ಪಂಜಾಬ್ ಸರ್ಕಾರಕ್ಕೆ ಸೂಚಿಸಲಾಗಿದೆ.
ಇನ್ನು ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ರೈತ ಸಂಘಟನೆಗಳು ಈ ಪತ್ರಕ್ಕೆ ಕಿಡಿಕಾರಿದ್ದು, "ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಭಯೋತ್ಪಾದಕರು ಎಂದು ಬಿಂಬಿಸಲು ಪ್ರಯತ್ನಿಸಿದ್ದ ಸರ್ಕಾರ, ಈಗ ರೈತರ ವರ್ಚಸ್ಸಿಗೆ ಕಳಂಕ ತರಲು ಈ ಪ್ರಯತ್ನ ಮಾಡುತ್ತಿದೆ" ಎಂಬ ಆರೋಪ ಕೇಳಿಬಂದಿದೆ.
ಪಂಜಾಬ್ನಲ್ಲಿ ಉತ್ತಮ ವೇತನದ ಕೆಲಸ ನೀಡುವುದಾಗಿ ನಂಬಿಸಿ ಕಾರ್ಮಿಕರನ್ನು ಅವರ ಮೂಲ ಊರಿನಿಂದ ಕರೆದುಕೊಂಡು ಹೋಗಲಾಗುತ್ತಿದ್ದು, ಪಂಜಾಬ್ ತಲುಪಿದ ಬಳಿಕ ಅವರನ್ನು ಶೋಷಿಸಲಾಗಿ, ಸರಿಯಾಗಿ ವೇತನ ನೀಡುವುದಿಲ್ಲ ಮತ್ತು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತದೆ. ಅವರು ಹೊಲದಲ್ಲಿ ಇನ್ನಷ್ಟು ಸಮಯ ದುಡಿಯುವಂತೆ ಮಾಡಲು ಈ ಕಾರ್ಮಿಕರಿಗೆ ಡ್ರಗ್ಸ್ ನೀಡಲಾಗುತ್ತಿದೆ. ಇದು ಅವರ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ರಕ್ಷಿಸಿದ ವ್ಯಕ್ತಿಗಳನ್ನು ಮುಂದಿನ ಕ್ರಮಕ್ಕಾಗಿ ರಾಜ್ಯ ಪೊಲೀಸರಿಗೆ ಬಿಎಸ್ಎಫ್ ಒಪ್ಪಿಸುತ್ತಿದೆ ಎಂದು ಅದು ಹೇಳಿದೆ.