ಹೈದರಾಬಾದ್, ಏ.03 (DaijiworldNews/HR): ಊಬರ್ ಕ್ಯಾಬ್ ಚಾಲಕನೊಬ್ಬ ತಿರುಪತಿಗೆ ಹೋಗಿ ಮುಡಿಕೊಟ್ಟ ಕೊಟ್ಟ ಕಾರಣಕ್ಕೆ ಕೆಲಸ ಕಳೆದುಕೊಂಡ ಘಟನೆ ಹೈದರಾಬಾದ್ನಲ್ಲಿ ನಡೆದಿದೆ.
ಊಬರ್ ಚಾಲಕ ಶ್ರೀಕಾಂತ್ ಎಂಬವರು ತಿರುಪತಿಗೆ ಹೋಗಿ ಮುಡಿ ಕೊಟ್ಟಿದ್ದು, ಅಲ್ಲಿಂದ ಬಂದು ಕೆಲಸಕ್ಕೆ ಮರಳಿದ ವೇಳೆಯಲ್ಲಿ ಊಬರ್ ನಿಯಮದಂತೆ ಸೆಲ್ಫಿ ತೆಗೆದು ಲಾಗ್ ಇನ್ ಆಗಲು ಯತ್ನಿಸಿದ್ದಾರೆ, ಆದರೆ ನಾಲ್ಕು ವಿಫಲ ಯತ್ನಗಳ ಬಳಿಕ ಅವರ ಖಾತೆ ರದ್ದಾಗಿದೆ ಎನ್ನಲಾಗಿದೆ.
ಒಂದು ವರ್ಷದಿಂದ ಊಬರ್ನಲ್ಲಿ ಶ್ರೀಕಾಂತ್ ಕೆಲಸ ಮಾಡುತ್ತಿದ್ದು, 1428 ಟ್ರಿಪ್ಗಳೊಂದಿಗೆ 4.67 ರೇಟಿಂಗ್ ಪಡೆದಿದ್ದು, ಊಬರ್ ಚಾಲನ ಕೆಲಸದಲ್ಲಿ ಒಳ್ಳೆಯ ಹೆಸರನ್ನು ಕೂಡ ಗಳಿಸಿದ್ದರು ಎನ್ನಲಾಗಿದೆ.
"ಈಗ ನನ್ನ ಖಾತೆಯನ್ನು ನಿರ್ಬಂಧಿಸಲಾಗಿದ್ದು, ಆಗಿರುವ ಸಮಸ್ಯೆಯನ್ನು ಬಗೆ ಹರಿಸುವಂತೆ ಊಬರ್ನ ಸಂಬಂಧಪಟ್ಟ ಅಧಿಕಾರಿಗಳ ಜೊತೆಗೆ ಮಾತನಾಡಿದ್ದೇನೆ. ಆದರೆ ಅವರು ಈ ಪ್ರಕ್ರಿಯೆ ಇನ್ನೂ ನಡೆಯುತ್ತಿದೆ ಹೇಳಿದ್ದಾರೆ, ಚಾಲನ ವೃತ್ತಿಯಿಂದಲೇ ನಮ್ಮ ಕುಟುಂಬ ನಡೆಯುತ್ತಿದ್ದು, ಈಗ ನನ್ನ ಸಂಸಾರ ತೊಂದರೆ ಅನುಭವಿಸುತ್ತಿದೆ" ಎಂದು ಹೇಳಿದ್ದಾರೆ.