ದಾವಣೆಗೆರೆ, ಏ 3(DaijiworldNews/MS): ಇಲ್ಲಿನ ಆವರೆಗೆರೆ ನಿವಾಸಿ ನ್ಯಾಯವಾದಿ ಎಸ್.ಪರಮೇಶ್ ಅವರ ಕಾರು ಮನೆಯ ಮುಂದೆ ನಿಂತಿದ್ದರೂ, ಒಂದೇ ದಿನ ಐದು ಟೋಲ್ ಗಳಲ್ಲಿ ಫಾಸ್ಟ್ಯಾಗ್ ಮೂಲಕ ಟೋಲ್ ಶುಲ್ಕ ಕಡಿತಗೊಂಡಿರುವ ಕುತೂಹಲಕಾರಿ ಸಂಗತಿ ಹೊರಬಿದ್ದಿದೆ.
ಹೆದ್ದಾರಿಗಳ ಟೋಲ್ ಮೂಲಕ ಸಾಗುವ ವಾಹನಗಳಿಗೆ ಫಾಸ್ಟ್ಟ್ಯಾಗ್ ಕಡ್ಡಾಯವೆಂಬ ನಿಯಮವಿದೆ. ಕಾರು ಟೋಲ್ ಪ್ಲಾಜಾ ಮೂಲಕ ಹಾದು ಹೋಗುತ್ತಿರುವಂತೆಯೇ, ಫಾಸ್ಟ್ ಟ್ಯಾಗ್ ಮೂಲಕ ನಿಮ್ಮ ಟೋಲ್ ಶುಲ್ಕವನ್ನು ಕಡಿತ ಮಾಡಲಾಗುತ್ತದೆ. ಆದರೆ ಎಸ್.ಪರಮೇಶ್ ಅವರ ಇನ್ನೋವಾ ಕಾರು (ಕೆಎ-17, ಎನ್-6828) ಮನೆ ಮುಂದೆ ನಿಲ್ಲಿಸಿದ್ದರೂ ಒಟ್ಟಾರೆ ಫಾಸ್ಟ್ಯಾಗ್ ನಿಂದ ಒಟ್ಟು ಏಳು ಬಾರಿ ವಿವಿಧ ಟೋಲ್ಗಳಲ್ಲಿ ಶುಲ್ಕ ಕಡಿತಗೊಂಡಿದೆ. ಅದರಲ್ಲಿ ಒಂದೇ ದಿನ ಐದು ಟೋಲ್ ಗಳಲ್ಲಿ ಶುಲ್ಕ ಕಡಿತವಾಗಿರುವುದು ತೋರಿಸುತ್ತಿದೆ.
ಮಾ.31ರ ರಾತ್ರಿ ದಾವಣಗೆರೆ ತಾಲೂಕಿನ ಹೆಬ್ಟಾಳು, ಚಿತ್ರದುರ್ಗದ ಗುಯಿಲಾಳ್, ಬೆಂಗಳೂರು ಸಮೀಪದ ಕಲುಮಹಳ್ಳಿ, ನವಯುಗ್, ಕರ್ಜಿವನ್ ಹಾಗೂ ಮಾ.25ರಂದು ಬೇರೆ ಎರಡು ಟೋಲ್ಗಳಲ್ಲಿ ಫಾಸ್ಟಾಗ್ ಮೂಲಕ ಶುಲ್ಕ ಕಡಿತವಾಗಿರುವ ಬಗ್ಗೆ ಅವರ ಮೊಬೈಲ್ಗೆ ಸಂದೇಶ ಬಂದಿದೆ. ಹೀಗಾಗಿ ಕಾರಿನ ಮಾಲಕರು ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ
ಈ ಕುರಿತು ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿರುವ ಅವರು, ಜತೆಗೆ ಪ್ರತಿ ಟೋಲ್ನಿಂದ 5 ಲ. ರೂ. ಪರಿಹಾರ ಕೋರಿ ಗ್ರಾಹಕ ನ್ಯಾಯಾಲಯಕ್ಕೂ ದೂರು ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ