ಕೊಚ್ಚಿ, ಏ 3(DaijiworldNews/MS): ಕೇರಳದ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮಂಡಳಿಯೂ ತನ್ನ ಅಧೀನದ 1240 ದೇವಾಲಯಗಳಲ್ಲಿ ಆರ್.ಎಸ್.ಎಸ್. ಚಟುವಟಿಕೆಗಳನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿದೆ.
ಸಾಂದರ್ಭಿಕ ಚಿತ್ರ
ತಿರುವಾಂಕೂರು ದೇವಸ್ವಂ ಬೋರ್ಡ್ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ಆರ್ಎಸ್ಎಸ್ ಶಾಖೆಗಳ ಕಾರ್ಯಚಟುವಟಿಕೆ, ದೈಹಿಕ ತರಬೇತಿ ಅಥವಾ ಕವಾಯತು ಸೇರಿ ಯಾವುದೇ ಚಟುವಟಿಕೆ ನಡೆಸುವಂತಿಲ್ಲ. ಅವಕಾಶ ನೀಡುವ ದೇವಸ್ವಂ ಅಧಿಕಾರಿಗಳ ವಿರುದ್ಧ ಸುತ್ತೋಲೆ ಮೂಲಕ ಎಚ್ಚರಿಕೆ ನೀಡಿದೆ.
ದೇವಾಸ್ವಂ ಆಯುಕ್ತರು ಮಾರ್ಚ್ 30 ರಂದು ಹೊರಡಿಸಿದ ಸುತ್ತೋಲೆಯಲ್ಲಿ, ದೇವಾಲಯದ ಭೂಮಿಯನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸುವುದನ್ನು ತಪ್ಪಿಸಲು ಮಂಡಳಿಯು ವರ್ಷಗಳ ಹಿಂದೆಯೇ ನಿರ್ಧಾರ ತೆಗೆದುಕೊಂಡಿದೆ. ಕೆಲವು ಅಧಿಕಾರಿಗಳು ದೇವಾಲಯದ ಆವರಣದಲ್ಲಿ ಇಂತಹ ಚಟುವಟಿಕೆಗಳಿಗೆ ಅನುಕೂಲ ಕಲ್ಪಿಸುತ್ತಿರುವುದು ಗಂಭೀರ ಕಳವಳಕಾರಿ ಸಂಗತಿಯಾಗಿದೆ.ದೇವಾಲಯಗಳ ವ್ಯಾಪ್ತಿಯಲ್ಲಿ ಆರ್.ಎಸ್.ಎಸ್. ಚಟುವಟಿಕೆ ನಿಯಂತ್ರಿಸಲು ವಿಫಲವಾದಲ್ಲಿ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಎಚ್ಚರಿಕೆ ನೀಡಿದೆ.
"ಈ ಆದೇಶದಲ್ಲಿ ಹೊಸದೇನೂ ಅಲ್ಲ, ದೇವಾಲಯದ ವ್ಯವಹಾರಗಳಲ್ಲಿ ರಾಜಕೀಯ ಹಸ್ತಕ್ಷೇಪವನ್ನು ತಪ್ಪಿಸಲು ವರ್ಷಗಳ ಹಿಂದೆಯೇ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ವರ್ಷದ ಜನವರಿಯಲ್ಲಿ ಸ್ವೀಕರಿಸಿದ ದೂರಿನ ಆಧಾರದ ಮೇಲೆ ದೇವಸ್ವಂ ಆಯುಕ್ತರು ಈ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಕೇವಲ ಆರ್ಎಸ್ಎಸ್ ಮಾತ್ರವಲ್ಲ, ಯಾವುದೇ ಸಂಘಟನೆ ಅಥವಾ ರಾಜಕೀಯ ಪಕ್ಷಕ್ಕಾಗಿ ದೇವಾಲಯದ ಆವರಣವನ್ನು ಬಳಸಲು ಅನುಮತಿ ನೀಡುವುದಿಲ್ಲ. ಈ ಆದೇಶದಲ್ಲಿ ದೂರಿನ ಆಧಾರದ ಮೇಲೆ ಆರ್ಎಸ್ಎಸ್ ಅನ್ನು ಹೆಸರಿಸಿದೆ "ಎಂದು ಎಂದು ಟಿಡಿಬಿ ಅಧ್ಯಕ್ಷ ಎನ್ ವಾಸು ಹೇಳಿದ್ದಾರೆ.