ಬೆಂಗಳೂರು, ಏ. 2 (DaijiworldNews/SM): ರಾಜ್ಯದಲ್ಲಿ ಸೋಂಕು ನಿಯಂತ್ರಣಕ್ಕೆ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವುದೇ ಹೊರತು ಲಾಕ್ ಡೌನ್, ಸೆಮಿ ಲಾಕ್ ಡೌನ್, ನೈಟ್ ಕರ್ಫ್ಯೂ ವಿಧಿಸುವುದಿಲ್ಲ ಎಂದು ಸರಕಾರ ಪುನರುಚ್ಚರಿಸಿದೆ. ಈ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಆರೋಗ್ಯ ಇಲಾಖೆ ಸೇರಿದಂತೆ ಇತರ ಇಲಾಖೆಗಳ ಅಧಿಕಾರಿಗಳ ಜೊತೆ ಅವರು ಸಭೆ ನಡೆಸಿದರು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಗಿಂತ ಸೋಂಕು ನಿಯಂತ್ರಣ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಪ್ರಯತ್ನಿಸಬೇಕೆಂದರು. ತಪ್ಪಿದ್ದಲ್ಲಿ ಸೂಕ್ತ ಕ್ರಮದ ಎಚ್ಚರಿಕೆಯನ್ನು ಕೂಡ ಅವರು ನೀಡಿದ್ದಾರೆ.
ಲಸಿಕೆ ಹಾಕುವ ಪ್ರಕ್ರಿಯೆಯನ್ನು ಹೆಚ್ಚಿಸಲು ಸೂಚನೆ ನೀಡಿದ್ದೇವೆ. ಸರ್ಕಾರವೇ ಮನೆ ಬಾಗಿಲಿಗೆ ಹೋಗಿ ಲಸಿಕೆ ಹಾಕುವ ಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ ಜನ ಹೆಚ್ಚು ಇರುವ ಕಡೆ ಲಸಿಕೆ ಹಾಕಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಸಿನಿಮಾ ಮಂದಿರಗಳಲ್ಲಿ ಶೇ. 50ರಷ್ಟು ಮಂದಿಗೆ ಅವಕಾಶ!
ಇನ್ನು ಅಧಿಕಾರಿಗಳ ಸಭೆ ನಡೆದ ಬಳಿಕ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಬೆಂಗಳೂರು ನಗರ ಸೇರಿದಂತೆ ರಾಜ್ಯದ 8 ಜಿಲ್ಲೆಗಳಲ್ಲಿ ಚಿತ್ರಮಂದಿರಗಳ ಮೇಲೆ ನಿಯಂತ್ರಣ ಹೇರಲಾಗಿದ್ದು, ಶೇ.50ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಲಾಗಿದೆ.
ಜಿಮ್ ಮತ್ತು ಸ್ವಿಮ್ಮಿಂಗ್ ಪೂಲ್ ಸಂಪೂರ್ಣ ಬಂದ್!
ಇನ್ನು ಈ ನಡುವೆ ರಾಜ್ಯಾದ್ಯಂತ ಜಿಮ್ ಮತ್ತು ಸ್ವಿಮ್ಮಿಂಗ್ ಪೂಲ್ ಗಳನ್ನು ಸಂಪೂರ್ಣ ಬಂದ್ ಮಾಡಿ ಮಾರ್ಗಸೂಚಿಯಲ್ಲಿ ಆದೇಶ ನೀಡಲಾಗಿದೆ. ಇದರ ಜೊತೆಗೆ ಸಾರಿಗೆ ಬಸ್ ಗಳಲ್ಲಿ ನಿಗದಿತ ಆಸನದ ಮೀತಿ ಮೀರಬಾರದು ಎಂದು ತಿಳಿಸಿದೆ. ರಾಜ್ಯಾದ್ಯಾಂತ ವಿದ್ಯಾಗಮ ಸೇರಿದಂತೆ ಎಲ್ಲಾ ಶೈಕ್ಷಣಿಕ ಚಟುವಟಿಕೆ ಬಂದ್ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ. ಯಾವುದೇ ರೀತಿಯ, ರ್ಯಾಲಿ, ಮುಷ್ಕರ ನಡೆಸುವಂತಿಲ್ಲ. ಧಾರ್ಮಿಕ ಆಚರಣೆ, ಜಾತ್ರೆಗೆ ನಿಷೇಧ ವಿಧಿಸಿ ಮಾರ್ಗಸೂಚಿಯಲ್ಲಿ ಆದೇಶ ನೀಡಲಾಗಿದೆ. ಏಪ್ರಿಲ್ 20ರ ವರೆಗೆ ಈ ಮಾರ್ಗಸೂಚಿ ಅನ್ವಯವಾಗಲಿದೆ ಎಂದು ಸರಕಾರ ಸ್ಪಷ್ಟಪಡಿಸಿದೆ.
ಹೊಸ ಮಾರ್ಗಸೂಚಿಯ ಪ್ರಮುಖಾಂಶಗಳು:
ರಾಜ್ಯಾದ್ಯಂತ ಜಿಮ್ ಮತ್ತು ಸ್ವಿಮ್ಮಿಂಗ್ ಪೂಲ್ ಗಳು ಬಂದ್
ಸಾರಿಗೆ ಬಸ್ ಗಳಲ್ಲಿ ನಿಗದಿತ ಆಸನಕ್ಕೆ ಮಾತ್ರ ಅವಕಾಶ
ವಿದ್ಯಾಗಮ ಸೇರಿದಂತೆ ಎಲ್ಲಾ ಶೈಕ್ಷಣಿಕ ಚಟುವಟಿಕೆ ಬಂದ್
ರ್ಯಾಲಿ, ಮುಷ್ಕರ, ಧಾರ್ಮಿಕ ಆಚರಣೆ, ಜಾತ್ರೆ ನಿಷೇಧ
ರಾಜ್ಯಾದ್ಯಂತ 6 ರಿಂದ 9 ತರಗತಿಗಳು ಬಂದ್
ಎಸ್.ಎಸ್.ಎಲ್.ಸಿ. ಪಿಯುಸಿ ತರಗತಿಗಳು ಯಥಾಸ್ಥಿತಿಯಲ್ಲಿ, ಹಾಜರಾತಿ ಕಡ್ಡಾಯವಲ್ಲ