ಬೆಂಗಳೂರು, ಎ.02 (DaijiworldNews/PY): ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ವಿಚಾರಣೆಗೆ ಹಾಜರಾಗಬೇಕಿದ್ದ ರಮೇಶ್ ಜಾರಕಿಹೊಳಿ ಅವರು ಅನಾರೋಗ್ಯದ ಕಾರಣ ನೀಡಿ ಗೈರಾಗಿದ್ದರು. ಇದೀಗ ಜಾರಕಿಹೊಳಿಗೆ ಮತ್ತೆ ನೋಟಿಸ್ ಜಾರಿ ಮಾಡಿರುವ ಎಸ್ಐಟಿ ಸೋಮವಾರ ವಿಚಾರಣೆಗೆ ಹಾಜರಾಗಬೇಕು ಎಂದು ತಿಳಿಸಿದೆ.
ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಎಸ್ಐಟಿ ಅಧಿಕಾರಿಗಳು ನೋಟಿಸ್ ನೀಡಿದ್ದರು. ಆದರೆ, ಅವರು ಅನಾರೋಗಯದ ಕಾರಣ ಹೇಳಿ ವಿಚಾರಣೆಗೆ ಗೈರಾಗಿದ್ದರು. ವಿಪರೀತ ಜ್ವರದ ಕಾರಣ ವಿಚಾರಣೆಗೆ ಹಾಜರಾಗುತ್ತಿಲ್ಲ ಎಂದು ಪತ್ರದ ಮೂಲಕ ತಮ್ಮ ವಕೀಲರಿಂದ ಎಸ್ಐಟಿಗೆ ತಲುಪಿಸಿದ್ದರು.
ಪ್ರಕರಣದ ಸಂಬಂಧ ಸಿಡಿ ಸಂತ್ರಸ್ತ ಯುವತಿಯ ಪಿಜಿ ಹಾಗೂ ಮಂತ್ರಿ ಅಪಾರ್ಟ್ಮೆಂಟ್ ಸ್ಥಳ ಮಹಜರು ಮಾಡಿಲಸಲಾಗಿದ್ದು, ವೈದ್ಯಕೀಯ ಪರೀಕ್ಷೆಯನ್ನು ಕೂಡಾ ಮಾಡಿಸಲಾಗಿದೆ. ಈ ಎಲ್ಲಾ ಪ್ರಕ್ರಿಯೆಗಳು ಆದ ಬಳಿಕ ಎಸ್ಐಟಿ ರಮೇಶ್ ಜಾರಕಿಹೊಳಿ ಅವರಿಗೆ ಶುಕ್ರವಾರ ವಿಚಾರಣೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಆದರೆ, ಅನಾರೋಗ್ಯದ ಕಾರಣ ನೀಡಿ ವಿಚಾರಣೆಗೆ ಗೈರಾಗಿದ್ದರು.
ಈ ಹಿನ್ನೆಲೆ ಎಸ್ಐಟಿ ಅಧಿಕಾರಿಗಳು ಸೋಮವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸಚಿವ ರಮೇಶ್ ಜಾರಕಿಹೊಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.