ಮಧುಗಿರಿ, ಎ.02 (DaijiworldNews/PY): ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವ ಬದಲಾಗಿ ಮೊಬೈಲ್ನಲ್ಲಿಯೇ ಕಾಲ ಕಳೆಯುತ್ತಿದ್ದ ಶಿಕ್ಷಕಿಯ ವಿರುದ್ದ ಅದೇ ಶಾಲೆಯ ವಿದ್ಯಾರ್ಥಿನಿ ದೂರು ನೀಡಿರುವ ಘಟನೆ ಮಧುಗಿರಿಯಲ್ಲಿ ನಡೆದಿದೆ.
ತಾಲೂಕಿನ ಪುರವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿಯ ವಿದ್ಯಾರ್ಥಿನಿ ವೈಷ್ಣವಿ ಪಿ.ಆರ್. ಶಿಕ್ಷಕಿಯ ವಿರುದ್ದ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರಕ್ಕೆ ದೂರು ನೀಡಿದ್ದಾಳೆ.
"ಶಾಲೆಯ ಸಂದರ್ಭ ಶಿಕ್ಷಕಿಯರು ತಮ್ಮ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಬಂದು ನಮ್ಮೊಂದಿಗೆ ಬಿಟ್ಟು ಬಿಡುತ್ತಾರೆ. ಅಲ್ಲದೇ, ಮಕ್ಕಳನ್ನು ಆಟ ಆಡಿಸುವಂತೆ ಒತ್ತಡ ಹೇರುತ್ತಿದ್ದು, ಮೊಬೈಲ್ನಲ್ಲೇ ಕಾಲ ಕಳೆಯುತ್ತಿದ್ದಾರೆ. ಇದರಿಂದ ನಮ್ಮ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ" ಎಂದು ವಿದ್ಯಾರ್ಥಿನಿ ಬೇಸರ ವ್ಯಕ್ತಪಡಿಸಿದ್ದಾರೆ.
ಕೆಲವು ಮಂದಿ ಯಾವುದೋ ಸಂಸ್ಥೆಯಲ್ಲಿ ಸದಸ್ಯರಾಗಿದ್ದು, ಅವರು ಅಲ್ಲಿನ ವ್ಯವಹಾರಗಳನ್ನು ಇಲ್ಲಿಯೇ ನಡೆಸುತ್ತಿದ್ದಾರೆ. ಹಾಗಾಗಿ ತರಗತಿಗಳು ಸರಿಯಾಗಿ ನಡೆಯದೇ ನಮಗೆ ತೊಂದರೆಯಾಗುತ್ತಿದೆ. ಶಾಲೆ ಆವರಣ ಕೂಡಾ ಶುಚಿಯಾಗಿಲ್ಲ. ಈ ವಿಚಾರದ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗೆ ಪರಿಹಾರ ಕೊಡಿಸುವಂತೆ ಸಂಸ್ಥೆಯ ಅಧ್ಯಕ್ಷ ಸಿದ್ದಲಿಂಗೇಗೌಡರಿಗೆ ಪತ್ರ ಬರೆದಿದ್ದಾರೆ.
ವಿದ್ಯಾರ್ಥಿನಿಯ ಪತ್ರಕ್ಕೆ ಸ್ಪಂದಿಸಿರುವ ಸಿದ್ದಲಿಂಗೇಗೌಡರು ಜಿಲ್ಲಾಧಿಕಾರಿ, ಮಧುಗಿರಿ ಉಪವಿಭಾಗಾಧಿಕಾರಿ, ಡಿಡಿಪಿಐ, ಜಿಪಂಸಿಇಒ ಹಾಗೂ ಬಿಇಒ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.