ಬೆಂಗಳೂರು, ಏ.02 (DaijiworldNews/HR): "ಮಾಜಿ ಸಚಿವ ಜಾರಕಿಹೊಳಿ ಅವರದ್ದು ಎನ್ನಲಾದ ಸಿ.ಡಿ ಪ್ರಕರಣದ ಯುವತಿಯ ಪರವಾಗಿ ಕೋರ್ಟ್ನಲ್ಲಿ ವಾದಿಸುತ್ತಿರುವುದು ವಕೀಲ ಕೆ.ಎನ್.ಜಗದೀಶ್ ಅಲ್ಲ, ಬದಲಿಗೆ ಮಂಜು ಎನ್ನುವ ವಕೀಲ ಯುವತಿ ಪರ ವಕಾಲತ್ತು ವಹಿಸಿದ್ದಾರೆ. ಆದರೆ ಜಗದೀಶ್ ಸುಮ್ಮನೇ ಬೀದಿ ರಂಪಾಟ ಮಾಡುತ್ತಿದ್ದಾರೆ" ಎಂದು ಎಸ್ಐಟಿ ಆರೋಪಿಸಿದೆ.
ಈ ಕುರಿತು ವಕೀಲ ಜಗದೀಶ್ ವಿರುದ್ಧ ಎಸ್ಐಟಿ ಅಧಿಕಾರಿಗಳು ಹಿರಿಯ ಅಧಿಕಾರಿಗಳಿಗೆ ದೂರನ್ನು ದಾಖಲಿಸಿದ್ದಾರೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಜಗದೀಶ್ ಸುಮ್ಮನೆ ಮೂಗು ತೂರಿಸುವ ಪ್ರಯತ್ನ ಮಾಡುತ್ತಿದ್ದು, ಯುವತಿಯ ಪರ ವಕಾಲತ್ತು ಹಾಕಿರೋದು ಮಂಜು ಎಂಬುವವರು. ಆದರೆ, ಇವರು ವಕಾಲತ್ತು ಇಲ್ಲದಿದ್ದರೂ ಬಂದು ತನಿಖಾಧಿಕಾರಿಗಳಿಗೆ ಕಿರಿಕಿರಿ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೆ.ಎನ್.ಜಗದೀಶ್, "ಸಿ.ಡಿ ಯುವತಿ ಹೇಳಿದ ಕಾರಣ ಮಾಧ್ಯಮಗಳಿಗೆ ಮಾಹಿತಿ ನೀಡುತ್ತಾ ಬಂದಿದ್ದೇನೆ. ಹಾಗೇನಾದರೂ ಇದ್ದಲ್ಲಿ ಎಸ್ಐಟಿ ನನಗೆ ನೊಟೀಸ್ ನೀಡಲಿ, ನಾನು ಮಾಹಿತಿ ನೀಡುವುದನ್ನ ನಿಲ್ಲಿಸುತ್ತೇನೆ" ಎಂದು ಹೇಳಿದ್ದಾರೆ.