ಚಿತ್ರದುರ್ಗ, ಎ.02 (DaijiworldNews/PY): "ರಾಜ್ಯದಿಂದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕಂಪೆನಿ ಹೋಗಬೇಕು. ಇಲ್ಲವಾದಲ್ಲಿ ರಾಜ್ಯದ ಜನತೆಗೆ ಒಳಿತಾಗುವುದಿಲ್ಲ" ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿ. ನಿಜಲಿಂಗಪ್ಪ ಸ್ಮಾರಕದ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದ ಜನತೆಯಲ್ಲಿ ಮನವಿ ಮಾಡುತ್ತೇನೆ. ರಾಜ್ಯದಿಂದ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಕಂಪೆನಿ ಹೋಗಬೇಕು. ಇಲ್ಲವಾದಲ್ಲಿ ರಾಜ್ಯದ ಜನತೆಗೆ ಒಳಿತಾಗುವುದಿಲ್ಲ. ಯಡಿಯೂರಪ್ಪ ಅವರಿಗೆ ಮಠಾಧೀಶರು ಬೆಂಬಲ ಕೊಡುವುದನ್ನು ಮೊದಲು ನಿಲ್ಲಿಸಬೇಕು. ರಾಜ್ಯದಲ್ಲಿ ಹೊಸ ಶಕ್ತಿಯ ಆಡಳಿತ ಪ್ರಾರಂಭವಾಗಬೇಕು" ಎಂದಿದ್ದಾರೆ.
"ರಾಜ್ಯದಲ್ಲಿ ಪ್ರಾಮಾಣಿಕ ಸರ್ಕಾರ ಬರಬೇಕು. ಇಲ್ಲಿನ ಮೂರು ಪಕ್ಷಗಳ ಮೇಲೆ ನಂಬಿಕೆ ಇಲ್ಲ. ಹೊಸ ಶಕ್ತಿಯೊಂದು ಉದಯಿಸುವ ಅವಶ್ಯಕತೆ ಇದೆ" ಎಂದು ತಿಳಿಸಿದ್ದಾರೆ.
"ಸಿಎಂ ಬಿಎಸ್ವೈ ನೇತೃತ್ವದ ಸರ್ಕಾರ ಕಂಪೆನಿ ಸರ್ಕಾರ. ವ್ಯಾಪಾರದ ಅಂಗಡಿ ಮಾಡಿಕೊಂಡಿದ್ದು, ವರ್ಗಾವಣೆ ರೇಟ್ ಫಿಕ್ಸ್ ಆಗಿದೆ. ರಾಜ್ಯದಲ್ಲಿ ಬೇಗ ಚುನಾವಣೆ ಬರಬೇಕು. ಅರಾಜಕತೆ ಸೃಷ್ಟಿಯಾಗಲು ಬಿಡಬಾರದು" ಎಂದಿದ್ದಾರೆ.
ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, "ಜಾರಕಿಹೊಳಿ ಅವರನ್ನು ಬಂಧಿಸುವ ಬಗ್ಗೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಈ ಪ್ರಕರಣವು ದೇಶದ ಮೇಲೆ ಪ್ರಭಾವ ಬೀರಿದೆ. ಈ ಪ್ರಕರಣದ ಬಗ್ಗೆ ಉನ್ನತ ಮಟ್ಟದಲ್ಲಿ ಸಮಗ್ರವಾದ ತನಿಖೆಯಾಗಬೇಕು" ಎಂದು ಹೇಳಿದ್ದಾರೆ.
ಗ್ರಾಮೀಣಾಭಿವೃದ್ಧಿ ಖಾತೆ ಮೇಲೆ ಸಿಎಂ ಬಿಎಸ್ವೈ ಹಸ್ತಕ್ಷೇಪ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಸಿಎಂ ಬಿಎಸ್ವೈ ಅವರು ಸರ್ವಾಧಿಕಾರಿ. ಈ ವಿಚಾರದ ಬಗ್ಗೆ ಈಶ್ವರಪ್ಪ ಅವರ ವಾದ ಸರಿಯಾಗಿಯೇ ಇದೆ" ಎಂದಿದ್ದಾರೆ.