ಬೆಂಗಳೂರು, ಏ 2(DaijiworldNews/MS): ಅಸ್ಸಾಂನಲ್ಲಿ ಎರಡನೇ ಹಂತದ ಚುನಾವಣೆ ನಡೆದ ಬಳಿಕ ಬಿಜೆಪಿ ಅಭ್ಯರ್ಥಿಯೊಬ್ಬರ ಕಾರಿನಲ್ಲಿ ಇವಿಎಂ ಮತಯಂತ್ರ ಹಾಗೂ ವಿವಿಪ್ಯಾಟ್ ಪತ್ತೆಯಾಗಿರುವುದರಿಂದ ಮತಗಟ್ಟೆ ಸಂಖ್ಯೆ 149 ರತಾಬರಿಯ ಇಂದಿರಾ ಎಮ್ ವಿ ಶಾಲೆಯಲ್ಲಿ ಮರುಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿಕೆ ನೀಡಿದೆ. ಇವಿಎಂ ಹಾಗೂ ವಿವಿ ಪ್ಯಾಟ್ ಗಳಿಗೆ ಯಾವುದೇ ರೀತಿಯಲ್ಲಿ ಹಾನಿಯಾಗಿಲ್ಲ. ಸೀಲ್ ಗಳನ್ನು ತೆರೆದಿಲ್ಲ. ಭದ್ರತಾ ಕೊಠಡಿಗಳಿಗೆ ಸಾಗಿಸಲಾಗಿದೆ ಅದರೂ ಮರುಚುನಾವಣೆ ನಡೇಸುವುದಾಗಿ ಆಯೋಗ ತಿಳಿಸಿದೆ.
ಮತದಾನ ನಡೆದ ದಿನವೇ ಮತಯಂತ್ರವೊಂದು ಬಿಜೆಪಿ ಶಾಸಕರೊಬ್ಬರಿಗೆ ಸೇರಿದ ಕಾರಿನಲ್ಲಿ ಇವಿಎಂ ಮತಯಂತ್ರ ಹಾಗೂ ವಿವಿಪ್ಯಾಟ್ ಪತ್ತೆಯಾಗಿದ್ದು ಅಸ್ಸಾಂ ರಾಜಕೀಯ ವಲಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.
ಬಿಜೆಪಿ ಶಾಸಕ ಕೃಷ್ಣೇಂದು ಪೌಲ್ ಅವರ ಸಂಬಂಧಿಕರೊಬ್ಬರಿಗೆ ಸೇರಿದ ಮಹೀಂದ್ರ ಬೊಲೇರೋ ಕಾರಿನಲ್ಲಿ ಮತಯಂತ್ರದೊಂದಿಗೆ ಚುನಾವಣಾ ಅಧಿಕಾರಿಗಳು ಸಾಗಿಸುತ್ತಿದ್ದರು. ಇದನ್ನು ಕಂಡ ಸ್ಥಳೀಯರು ಕಾರಿನ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಸಹಾಯಕ್ಕೆ ಧಾವಿಸಿ ಬಂದ ಭದ್ರತಾ ಸಿಬ್ಬಂದಿ ಮೇಲೂ ಸ್ಥಳೀಯರು ಕಲ್ಲು ತೂರಾಟ ಮಾಡಿದ್ದಾರೆ. ಬಳಿಕ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಜನರನ್ನು ಚದುರಿಸುವಲ್ಲಿ ಯಶಸ್ವಿಯಾಗಿದ್ದರು.
ಚುನಾವಣಾ ಸಿಬ್ಬಂದಿ ನೀಡಿರುವ ಮಾಹಿತಿ ಪ್ರಕಾರ, ಮತದಾನದ ನಂತರ ಮತಯಂತ್ರವನ್ನು ಸ್ಟ್ರಾಂಗ್ ರೂಮ್ಗೆ ಸಾಗಿಸುತ್ತಿದ್ದಾಗ ಕಾರು ಕೆಟ್ಟು ಹೋಗಿದೆ. ಆಗ ಅಲ್ಲಿ ಬರುತ್ತಿದ್ದ ಮತ್ತೊಂದು ಕಾರಿನ ಮೂಲಕ ನಾವು ಮತಯಂತ್ರ ಸಾಗಿಸುತ್ತಿದ್ದೆವು. ತಮಗೆ ಅ ಕಾರು ಬಿಜೆಪಿ ಶಾಸಕ ಕೃಷ್ಣೇಂದು ಪೌಲ್ ಅವರಿಗೆ ಸೇರಿದ್ದೆಂದು ತಮಗೆ ತಿಳಿದಿರಲಿಲ್ಲ ಎಂದಿದ್ಧಾರೆ.
ಕಾರಿನಲ್ಲಿ ಪತ್ತೆಯಾದ ಇವಿಎಂ ಮೆಷೀನ್ ಭದ್ರವಾಗಿತ್ತೆನ್ನಲಾಗಿದೆ. ಆದರೂ ಈ ಸಂಬಂಧಿಸಿದಂತೆ ಚುನಾವಣಾ ಆಯೋಗ ನಾಲ್ವರು ಅಧಿಕಾರಿಗಳನ್ನು ಕೂಡ ಅಮಾನತುಗೊಳಿಸಿದೆ. ಇನ್ನು ಇವಿಎಂ ಯಂತ್ರಗಳ ಸಾಗಾಟ ಪ್ರಕ್ರಿಯೆಯನ್ನು ಉಲ್ಲಂಘಿಸಿದಕ್ಕಾಗಿ ಚುನಾವಣಾ ಅಧಿಕಾರಿಯೋರ್ವರಿಗೆ ಶೋಕಾಸ್ ನೋಟೀಸನ್ನು ಆಯೋಗ ನೀಡಿದೆ. ಮಾತ್ರವಲ್ಲದೆ ಮರುಚುನಾವಣೆ ನಡೆಸಲಾಗುವುದು ಎಂದು ಚುನಾವಣಾ ಆಯೋಗ ಹೇಳಿದೆ.