ಬೆಂಗಳೂರು, ಎ.02 (DaijiworldNews/PY): ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಮನೆಯಲ್ಲೇ ಆರೋಗ್ಯ ಸಿಬ್ಬಂದಿಗಳನ್ನು ಕರೆಸಿಕೊಂಡು ಕೊರೊನಾ ಲಸಿಕೆ ಹಾಕಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಕಿಡಿಕಾರಿದ್ದು, "ಸರ್ಕಾರದ ತುಘಲಕ್ ದರ್ಬಾರ್ಗೆ ಅಮಾನತಾಗಬೇಕಿದ್ದಿದ್ದು ಸಚಿವರಲ್ಲವೇ?" ಎಂದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್," ಬಿಜೆಪಿ ಆಡಳಿತ ತುಘಲಕ್ ದರ್ಬಾರ್ ಇದ್ದಂಗೆ! ಇಲ್ಲಿ ಆರೋಪಿಗೆ ಸರ್ಕಾರದ ಶ್ರೀರಕ್ಷೆ, ಸಂತ್ರಸ್ತೆಗೆ ವಿಚಾರಣೆಯ ಶಿಕ್ಷೆ! ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಂಬಂತೆ ಮಂತ್ರಿ ಮನೆಗೆ ಕರೆಸಿ ಲಸಿಕೆ ಹಾಕಿಸಿಕೊಂಡರೆ, ಆರೋಗ್ಯಾಧಿಕಾರಿಗೆ ಅಮಾನತು ಶಿಕ್ಷೆ! ಅಮಾನತಾಗಬೇಕಿದ್ದಿದ್ದು ಸಚಿವ ಬಿ.ಸಿ.ಪಾಟೀಲ್ ಅಲ್ಲವೇ ಸಿಎಂ ಬಿ.ಎಸ್.ಯಡಿಯೂರಪ್ಪ ಅವರೇ?" ಎಂದು ಪ್ರಶ್ನಿಸಿದೆ.
ಮಾರ್ಚ್ 2 ರಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹಾಗೂ ಅವರ ಪತ್ನಿ ವನಜಾ ಪಾಟೀಲ್ ಅವರು ಹಾವೇರಿ ಜಿಲ್ಲೆ ಹಿರೇಕೆರೂರಿನ ತಮ್ಮ ನಿವಾಸಕ್ಕೆ ಆರೋಗ್ಯ ಸಿಬ್ಬಂದಿಗಳನ್ನು ಕರೆಸಿಕೊಂಡು ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದರು. ಈ ವಿಚಾರ ತೀವ್ರ ಆಕ್ಷೇಪಕ್ಕೆ ಕಾರಣವಾಗಿತ್ತು. ಕೊರೊನಾ ಲಸಿಕೆ ನಿಯಮಾವಳಿಗಳ ಪ್ರಕಾರ, ನಿಗದಿಪಡಿಸಿದ ಆಸ್ಪತ್ರೆಗಳಲ್ಲೇ ಲಸಿಕೆ ನೀಡಬೇಕಾಗಿದ್ದು, ಈ ಕಾರಣದಿಂದ ಹಿರೆಕೇರೂರು ತಾಲೂಕು ಆರೋಗ್ಯಾಧಿಕಾರಿಯನ್ನು ಅಮಾನತು ಮಾಡಲಾಗಿದೆ.