ಹಾಸನ, ಎ.02 (DaijiworldNews/PY): ಉತ್ತರ ಪತ್ರಿಕೆಯ ಉತ್ತರಗಳನ್ನು ಉದ್ದೇಶಪೂರ್ವಕವಾಗಿ ಹೊಡೆದು ಹಾಕಿ ತಾನು ಫೇಲ್ ಆಗಲು ಕಾರಣರಾಗಿದ್ದಾರೆ ಎಂದು ಆರೋಪಿಸಿ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಯೊಬ್ಬಯೋರ್ವ ಕಾಲೇಜಿನ ಪ್ರಾಂಶುಪಾಲರ ವಿರುದ್ದವೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನದ ನರ್ಸಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ಚನ್ನಯ್ಯ ಬಿಎಸ್ಸಿ ನರ್ಸಿಂಗ್ ಓದುತ್ತಿದ್ದ ಚನ್ನಯ್ಯ ಪ್ರಾಂಶುಪಾಲರ ವಿರುದ್ದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಚನ್ನಯ್ಯ ರ್ಯಾಂಕ್ ವಿದ್ಯಾರ್ಥಿಯಾಗಿದ್ದು, ಕಳೆದ ಫೆಬ್ರವರಿ ತಿಂಗಳಿನಲ್ಲಿ ನಡೆದ ಪರೀಕ್ಷೆಯಲ್ಲಿ ಫೇಲ್ ಆಗಿದ್ದ. ಈ ವಿಚಾರ ತಿಳಿದು ಆತ ತುಂಬಾ ವಿಚಲಿತನಾಗಿದ್ದ. ಇದಾದ ಬಳಿಕ ಆತ ಇದರಲ್ಲಿ ಏನೋ ತಪ್ಪಿ ನಡೆದಿದೆ ಎನ್ನುವ ಅನುಮಾನದಿಂದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಿಂದ ಉತ್ತರ ಪತ್ರಿಕೆ ತರಿಸಿ ನೋಡಿದ ಸಂದರ್ಭ ಈ ಪ್ರಕರಣ ಬೆಳಕಿಗೆ ಬಂದಿದೆ.
ವಿದ್ಯಾರ್ಥಿ ಚನ್ನಯ್ಯ ಬರೆದಿರುವ ಹಲವು ಸರಿ ಉತ್ತರಗಳನ್ನು ಪೆನ್ನಲ್ಲಿ ಗೀಚಿ ಹೊಡೆದು ಹಾಕಲಾಗಿದೆ. ಇದರಿಂದ ತಾನು ಫೇಲ್ ಆಗಿದ್ದೇನೆ ಎಂದು ಚನ್ನಯ್ಯ ಅಸಹಾಯಕತರ ಹೊರಹಾಕಿದ್ದಾನೆ.
ನನ್ನನ್ನು ಫೇಲ್ ಮಾಡಿರುವುದರಲ್ಲಿ ಕಾಲೇಜಿನ ಪ್ರಾಂಶುಪಾಲರ ಕೈವಾಡವಿದೆ ಎಂದು ಆರೋಪಿಸಿದ ವಿದ್ಯಾರ್ಥಿ ಹೋರಾಟಕ್ಕಿಳಿದಿದ್ದಾನೆ. ಘಟನೆಯ ಬಗ್ಗೆ ಹಾಸನದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕಾಲೇಜಿನ ಪ್ರಾಂಶುಪಾಲೆ ಶೋಭ ದೇವಮಾನೆ ವಿರುದ್ದ ದೂರು ದಾಖಲಾಗಿದೆ.