ವಿಜಯಪುರ, ಏ.02 (DaijiworldNews/HR): ಯಡಿಯೂರಪ್ಪ ಅವರಂತೆ ಸಚಿವ ಈಶ್ವರಪ್ಪ ಕೂಡ ಪಕ್ಷ ಕಟ್ಡಿದ ಹಿರಿಯ ನಾಯಕ. ಅವರಿಗೆ ಇಲಾಖೆಯಲ್ಲಿ ಸಚಿವರಾಗಿ ಮುಕ್ತ ಸ್ವಾತಂತ್ರ್ಯ ಇಲ್ಲವಾಗಿದ್ದು, ತಾಳ್ಮೆ ಮೀರಿ ಸ್ಫೋಟಗೊಂಡಿದ್ದಾರೆ. ಸಂಪುಟದಲ್ಲಿ ಇನ್ನೂ ಸ್ಪೋಟಗಳಾಗಲಿದೆ" ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಮೇ 2 ರ ಬಳಿಕ ಯಡಿಯೂರಪ್ಪ ಸಂಪುಟದಲ್ಲಿ ಇನ್ನೂ ದೊಡ್ಡ ಮಟ್ಟದ ಸ್ಫೋಟ ಆಗಲಿದ್ದು, ಕರ್ನಾಟಕದಲ್ಲಿ ಮೋದಿ ಅವರು ಬಯಸಿದ ಬಿಜೆಪಿ ಸರ್ಕಾರ ಇಲ್ಲ, ಅಪ್ಪ-ಮಕ್ಕಳ ಆಡಳಿತದ ಸರ್ಕಾರ ನಡೆಯುತ್ತಿದೆ" ಎಂದರು.
"ಪಕ್ಷದ ಶಾಸಕರು ದುಂಬಾಲು ಬಿದ್ದು ಗೋಗರೆದರೂ 10 ಕೋಟಿ ಅನುದಾನ ನೀಡದ ಯಡಿಯೂರಪ್ಪ, ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವರಿಗೂ ತಿಳಿಯದಂತೆ ನೂರಾರು ಕೋಟಿ ರೂ. ನೀಡುತ್ತಾರೆ" ಎಂದಿದ್ದಾರೆ.
ಇನ್ನು "ಮುಖ್ಯಮಂತ್ರಿ, ಮುಖ್ಯಮಂತ್ರಿ ಮಗ ಎಂದ ಮಾತ್ರಕ್ಕೆ ವಿಜಯೇಂದ್ರ ಎಲ್ಲ ಇಲಾಖೆಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರೆ ಯಾವ ಸಚಿವರು ತಾನೆ ಸಹಿಸಲು ಸಾಧ್ಯ. ಈಶ್ವರಪ್ಪ ಏನು ಅನನುಭವಿಗಳೇ?" ಎಂದು ಪ್ರಶ್ನಿಸಿದ್ದಾರೆ.