ಬೆಂಗಳೂರು, ಏ 2(DaijiworldNews/MS): ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ದ ಸಚಿವ ಈಶ್ವರಪ್ಪ ರಾಜ್ಯಪಾಲರಿಗೆ ಮತ್ತು ಪಕ್ಷದ ವರಿಷ್ಟರಿಗೆ ನೀಡಿದ ದೂರು ರಾಜ್ಯ ರಾಜಕಾರಣದಲ್ಲಿ ಕಂಪನ ಉಂಟುಮಾಡಿದ ಬೆನ್ನಲ್ಲೇ ಪ್ರತಿಪಕ್ಷಗಳು, ಸರ್ಕಾರದ ಮೇಲೆ ವಾಗ್ದಾಳಿ ನಡೆಸತೊಡಗಿದೆ.
ವಿಪಕ್ಷಗಳ ಈ ವಾಗ್ದಾಳಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಡೆಗೂ ತಿರುಗಿದ್ದು, ಈ ವಿಚಾರವನ್ನು ಪಕ್ಷದ ವೇದಿಕೆಯಲ್ಲಿ ಬಗೆಹರಿಸಿಕೊಳ್ಳದೆ, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್ ಎಂದು ನಿರೂಪಿಸಿದ್ದೀರಿ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ " ಕಾಮಿಡಿ ಕಿಲಾಡಿ ನಳಿನ್ ಕುಮಾರ್ ಕಟೀಲ್ ಬೇರೊಬ್ಬರ ಕೀಲಿಗೊಂಬೆ ಅಧ್ಯಕ್ಷರಾಗಿ ಪಕ್ಷದ ಆಂತರಿಕ ಕಲಹವನ್ನು ನಿಭಾಯಿಸಲು ಅಗದ್ದಕ್ಕೆ ತಮಗೆ ಬೆನ್ನೆಲುಬಿಲ್ಲ ಎನ್ನುವುದು! ನಿಮ್ಮ ಮನೆಯಲ್ಲಿ ಬೆಂಕಿ ಬಿದ್ದಿದ್ದರೆ ಕಾಂಗ್ರೆಸ್ ಕಡೆ ಬೆಟ್ಟು ತೋರಿಸಿ ಬಚಾವಾಗುವ ನಿಮ್ಮ ಈ ಹೇಡಿತನದಿಂದ ಪಕ್ಷವೊಂದರ ಅಧ್ಯಕ್ಷ ಸ್ಥಾನಕ್ಕೆ ನಾಲಾಯಕ್ ಎಂದು ನಿರೂಪಿಸಿದ್ದೀರಿ. ಮಾನ ಮುಚ್ಚಿಕೊಳ್ಳಲು ಕಾಂಗ್ರೆಸ್ ಕಡೆ ಕೈತೋರಿಸುವ ಡಾಲರ್ ನಳಿನ್ ಅವರಿಗೆ ಯತ್ನಾಳ್ ಅವರನ್ನು ನಿಭಾಯಿಸಲಾಗಲಿಲ್ಲ, ರೇಣುಕಾಚಾರ್ಯರನ್ನು ನಿಯಂತ್ರಿಸಲಿಲ್ಲ ,ಈಶ್ವರಪ್ಪರನ್ನು ಕಂಟ್ರೋಲ್ ಮಾಡಲಿಲ್ಲ, ಶಾಸಕರ, ಸಚಿವರ ಜಗಳ ನಿಲ್ಲಿಸಲಿಲ್ಲ. ನಿಮ್ಮದೇ ಪಕ್ಷದವರಲ್ಲಿ ತಾವು ನಾಲಾಯಕ್ ಎನಿಸಿಕೊಂಡು ಮತ್ತೊಬ್ಬರ ಬಗ್ಗೆ ಮಾತಾಡುವುದು ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದೆ.
ಇನ್ನು ಮನಸ್ತಾಪದ ಬಗ್ಗೆ ಪ್ರತಿಕ್ರಿಯಿಸಿರುವ ನಳಿನ್ , "ಈ ಬಗ್ಗೆ ಈಶ್ವರಪ್ಪ ಹಾಗೂ ಯಡಿಯೂರಪ್ಪ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಎಲ್ಲ ಭಿನ್ನಾಭಿಪ್ರಾಯಗಳನ್ನು ಪರಿಹರಿಸುತ್ತೇನೆ" ಎಂದು ಹೇಳಿದ್ದಾರೆ.