ಮೈಸೂರು, ಎ.02 (DaijiworldNews/PY): "ನಾನು ರೆಬಲ್ ಅಲ್ಲ, ಲಾಯಲ್. ನಿಯಮ ಪಾಲನೆಗಾಗಿ ಈ ರೀತಿಯ ಪತ್ರ ಬರೆದಿದ್ದೇನೆ" ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಸಿಎಂ ಬಿ.ಎಸ್.ವೈ ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, "ನಿಯಮಗಳ ಅನುಸಾರ ಅನುದಾನ ಬಿಡುಗಡೆ ಮಾಡಿದ್ದರೆ ನಾನು ಆಕ್ಷೇಪ ಮಾಡುತ್ತಿರಲಿಲ್ಲ. ಬಜೆಟ್ನಲ್ಲಿ ಘೋಷಣೆಯಾದ ಹಣವನ್ನು ಆರ್ಥಿಕ ಇಲಾಖೆ ಆಯಾ ಇಲಾಖೆಗೆ ಬಿಡುಗಡೆ ಮಾಡಲಿದೆ. ಆದರೆ, ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ನಿಯಮ ಮೀರಿ ಮಧ್ಯಪ್ರವೇಶ ಮಾಡಿದ್ದು, ಕಾನೂನು ಉಲ್ಲಂಘನೆ ಮಾಡಿ ಅನುದಾನ ಬಿಡುಗಡೆಗೆ ಪತ್ರದ ಮೂಲಕ ತಿಳಿಸಿದ್ದಾರೆ. ನಾನು ಇದಕ್ಕೆ ಆಕ್ಷೇಪಿಸಿದ್ದೇನೆ" ಎಂದಿದ್ದಾರೆ.
"ಸಿಎಂ ಯಡಿಯೂರಪ್ಪ ಅವರು ನನ್ನ ಇಲಾಖೆಯ ಪ್ರಿನ್ಸ್ಪಲ್ ಸೆಕ್ರೇಟರಿಗೆ 65 ಕೋಟಿ ಅನುದಾನ ಬಿಡುಗಡೆ ಬಗ್ಗೆ ತಡೆ ಹಿಡಿಯಲಾಗಿದ್ದಂತ ಅನುದಾನವನ್ನು ಬಿಡುಗಡೆ ಮಾಡುವಂತೆ ಪತ್ರದಲ್ಲಿ ಉಲ್ಲೇಖಿಸಿದ್ದರು. ನಮ್ಮ ಸೆಕ್ರೇಟರಿ ನನ್ನ ಬಳಿ ಕೇಳಿದಾಗ ನಿಯಮದ ಪ್ರಕಾರ ಏನು ಕ್ರಮ ಕೈಗೊಳ್ಳುತ್ತೀರೋ ಕೈಗೊಳ್ಳಿ ಎಂದು ಹೇಳಿದ್ದೆ. ಈ ಬಗ್ಗೆ ನಾನು ವಿವಿಧ ಅಧಿಕಾರಿಗಳ ಬಳಿ ಇದು ಸರಿನಾ ಎಂದು ಚರ್ಚೆ ನಡೆಸಿದಾಗ ಇದು ನಿಯಮಾನುಸಾರ ತಪ್ಪು ಎಂದು ತಿಳಿಯಿತು" ಎಂದು ಹೇಳಿದ್ದಾರೆ.
"ಇಲಾಖೆಯ ಹಣವನ್ನು ಸಂಬಂಧಿಸಿದ ಸಚಿವರ ಗಮನಕ್ಕೆ ಬಾರದಂತೆ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಮರಿಸ್ವಾಮಿಗೆ ನಿಯಮಬಾಹಿರವಾಗಿ ಬಿಡುಗಡೆಗೆ ಸಿಎಂ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎಂದರೆ ಇದು ಎಷ್ಟು ಸರಿ. ಈ ಕಾರಣಕ್ಕಾಗಿ ನಾನು ಸಿಎಂ ಅವರ ನಡೆಯ ಬಗ್ಗೆ ರಾಜ್ಯಪಾಲರಿಗೆ ಹಾಗೂ ಉಸ್ತುವಾರಿ ಸಚಿವ ಅರುಣ್ ಸಿಂಗ್ ಅವರಿಗೆ ಪತ್ರ ಬರೆದಿದ್ದೆ" ಎಂದು ತಿಳಿಸಿದ್ದಾರೆ.